17 Apr 2024

ಹದೀಸ್‌ ನಿಷೇಧ 3.

 ಹದೀಸ್‌ ನಿಷೇಧ: ದೇಹದಿಂದ ಕತ್ತನ್ನು ಕೊಯ್ದು ಬೇರ್ಪಡಿಸುವ ವಿಕೃತವಾದವದು!


ಮದ್‌ಹಬ್‌ ಇಮಾಮ್‌ಗಳು ಇಸ್ಲಾಮೀ ಜಗತ್ತಿಗೆ ನೀಡಿದ ಕೊಡುಗೆಯೂ ಅನನ್ಯವಾದುದು. ಅಸಾಮಾನ್ಯವಾದುದು. ಹದೀಸ್‌ ಕ್ರೋಡೀಕರಣವಿಲ್ಲದ ಕಾಲದಲ್ಲಿ ಅವರು ಸಮಕಾಲೀನ ಮನುಷ್ಯರ ಸಮಸ್ಯೆಗಳಿಗೆ ದೈವಿಕ ಶಿಕ್ಷಣದ ಬೆಳಕಿನಲ್ಲಿ ಪರಿಹಾರ ಸೂಚಿಸುತ್ತಿದ್ದರು. ಜನರಿಗೆ ಬದುಕುವ ಕಲೆ ಮತ್ತು ಇಸ್ಲಾಮೀ ಶರೀಅತನ್ನು ಹಸ್ತಾಂತರಿಸುತ್ತಿದ್ದರು. ಧಾರಾಳ ಸವಾಲುಗಳನ್ನು ಎದುರಿಸಿದ ವಿದ್ವಾಂಸರವರು. ವಿಶೇಷತೆ ಏನೆಂದರೆ, ಅವರಲ್ಲಿ ಯಾರೂ ಕೂಡಾ ತಮ್ಮ ಅಭಿಪ್ರಾಯಗಳನ್ನು "ಮದ್‌ಹಬ್‌" ಎಂದು ಘೋಷಿಸಿ ಸಮಾಜದ ಮೇಲೆ ಹೇರಿಲ್ಲ. ಅಂಧಾನುಕರಣೆಗೆ ಅವಕಾಶ ನೀಡಲಿಲ್ಲ. ಬದಲಾಗಿ *ಮದ್‌ಹಬ್‌ ಇಮಾಮರುಗಳು ಎಷ್ಟು ಸೂಕ್ಷ್ಮತೆ, ಪ್ರಾಮಾಣಿಕತೆ ಪಾಲಿಸಿದರೆಂದರೆ:* "ನಾವು ಹೇಳಿದ್ದಕ್ಕೆ ವಿರುದ್ಧವಾಗಿ ನೀವು ಪ್ರವಾದಿವರ್ಯ(ಸ)ರ ಹದೀಸನ್ನು ಕಂಡರೆ, ನಮ್ಮ ಅಭಿಪ್ರಾಯಗಳನ್ನು ಬದಿಗಿಟ್ಟು ಪ್ರವಾದಿಚರ್ಯೆಗೆ ಹಿಂತಿರುಗಿರಿ ಮತ್ತು ನಮ್ಮ ಅಭಿಪ್ರಾಯವನ್ನು ತಿರಸ್ಕರಿಸಿರೆಂದು" ಅವರು ಸ್ವತಃ ಅವರ ಬಗ್ಗೆಯೇ ಹೇಳಿದ್ದಾರೆ. *ಆಧುನಿಕ ಹದೀಸ್‌ ನಿಷೇಧಿಗಳಂತೆ, ಅಲ್ಲಾಹನಿಗೇ ದೀನ್‌ ಕಲಿಸಲು ಹೊರಟಲಿಲ್ಲ. ಗೊತ್ತಿಲ್ಲದ್ದನ್ನು ಗೊತ್ತಿದೆ ಎಂಬ ಅಹಂಕಾರ ಮೆರೆಯಲಿಲ್ಲ.* (ಶಾಂತಂಪಾಪಂ)

*إذا صَحَّ الحَدِيثُ فَهُوَ مَذْهَبِي*

"ಹದೀಸ್‌ ದೃಢಪಟ್ಟರೆ ಅದುವೇ ನನ್ನ ಮದ್‌ಹಬ್‌ ಆಗಿದೆ" ಎಂಬುದು ಅವರೆಲ್ಲರ ಒಕ್ಕೊರಲಿನ ಘೋಷಣೆಯಾಗಿತ್ತು. ಅಂದರೆ ಇಸ್ಲಾಮಿನ ಧಾರ್ಮಿಕ ವಿಶ್ವಾಸ, ಆಚಾರ-ವಿಚಾರ, ಆರಾಧನೆ ಮತ್ತು ಜೀವನ ಶೈಲಿಗೆ ಕುರ್‌ಆನ್‌ ಮತ್ತು ಪ್ರವಾದಿಚರ್ಯೆಯೇ ಪುರಾವೆಯಾಗಿರಬೇಕು. ಇದು ಸತ್ಯವಿಶ್ವಾಸಿಗಳ ಮೇಲಿನ ಬಾಧ್ಯತೆಯಾಗಿದೆ. ಅದರ ಹೊರತು ಒಬ್ಬೊಬ್ಬ ಕಛೇರಿ ತೆರೆದು ಅವನವನಿಗೆ ತೋಚಿದಂತೆ ವ್ಯಾಖ್ಯಾನಿಸಿ ಹದೀಸ್‌ ಬೇಡವೆಂದರೆ ಈ ಸಮುದಾಯ ಎಲ್ಲೆಲ್ಲೋ ಅಲೆದಾಡಬೇಕಾಗುತ್ತದೆ.

*وَمَا كَانَ لِمُؤْمِنٍ وَلَا مُؤْمِنَةٍ إِذَا قَضَى اللَّهُ وَرَسُولُهُ أَمْرًا أَنْ يَكُونَ لَهُمُ الْخِيَرَةُ مِنْ أَمْرِهِمْ ۗ وَمَنْ يَعْصِ اللَّهَ وَرَسُولَهُ فَقَدْ ضَلَّ ضَلَالًا مُبِينًا*


"ಅಲ್ಲಾಹ್ ಮತ್ತು ಅವನ ಸಂದೇಶವಾಹಕರು ಯಾವುದಾದರೊಂದು ವಿಷಯದ ತೀರ್ಮಾನ ಮಾಡಿಬಿಟ್ಟರೆ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು (ಸತ್ಯವಿಶ್ವಾಸಿಗಳಾದ) ಯಾವ ಸ್ತ್ರೀ-ಪುರುಷರಿಗೂ ಇಲ್ಲ. ಯಾರಾದರೂ ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಆಜ್ಞೋಲ್ಲಂಘನೆ ಮಾಡಿದರೆ, ಅವನು ಸುವ್ಯಕ್ತ ಪಥಭ್ರಷ್ಟತೆಯಲ್ಲಿ ಬಿದ್ದುಬಿಟ್ಟನು."

*[ಪವಿತ್ರ ಕುರ್‌ಆನ್‌, 33:36]*


ವಾಸ್ತವದಲ್ಲಿ ಹದೀಸ್‌ನ ಪಾವನ ಆಶಯಗಳೇ ಕುರ್‌ಆನಿನ ವ್ಯಾಖ್ಯಾನ. ಇಸ್ಲಾಮೀ ಇತಿಹಾಸದುದ್ದಕ್ಕೂ ಉಲೆಮಾಗಳು ಅಂಗೀಕರಿಸಿದ ಸತ್ಯವದು. ಅವೆರೆಡನ್ನೂ ಬೇರ್ಪಡಿಸಿ ನನಗೆ ಕುರ್‌ಆನ್‌ ಮಾತ್ರ ಸಾಕು, ಹದೀಸ್‌ ಬೇಡ ಎಂಬ ಮೊಂಡುವಾದ, ದೇಹದಿಂದ ಕತ್ತನ್ನು ಕೊಯ್ದು ಬೇರ್ಪಡಿಸಿದಂತೆ. ಅದು ಕುರ್‌ಆನಿನ ಮೂಲ ಆಶಯಕ್ಕೇ ಕೊಡಲಿಯೇಟು ನೀಡಿದಂತೆ.

*مَنْ يُطِعِ الرَّسُولَ فَقَدْ أَطَاعَ اللَّهَ ۖ*

"ಯಾರು ರಸೂಲರನ್ನು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹನನ್ನು ಅನುಸರಿಸಿದನು."

*[ಪವಿತ್ರ ಕುರ್‌ಆನ್‌, 4:80]* ನೀವೇ ಯೋಚಿಸಿ. ಹದೀಸ್‌ ನಿಷೇಧಿಗಳಿಂದ ಕುರ್‌ಆನಿನ ಅರ್ಥ ಕಲಿಯಲು ಅಥವಾ ಗ್ರಾಮರ್‌ ಕಲಿಯಲು ಹೋದರೆ ನಮ್ಮ ಈಮಾನ್‌ ಎಲ್ಲಿಗೆ ತಲುಪಬಹುದು? ಧರ್ಮದ ವಿಷಯದಲ್ಲಿ ಆಧುನಿಕ ಹದೀಸ್‌ ನಿಷೇಧಿಗಳ ದುರ್ವ್ಯಾಖ್ಯಾನ ಅತ್ಯಂತ ಅಪಾಯಕರದ್ದು. ಹದೀಸ್‌ ಬೇಡವೆಂಬ ಸಿದ್ಧಾಂತವೇ ಮಾದಕ ವ್ಯಸನದಂತೆ. ಜನ ಬಹಳ ಬೇಗನೆ ಅದರತ್ತ ಆಕರ್ಷಿತರಾಗುತ್ತಾರೆ. ಏಕೆಂದರೆ ಅದು ಮೆಲ್ಲಮೆಲ್ಲನೆ ನಮಾಝ್, ಉಪವಾಸ... ಮತ್ತಿತರ ಆರಾಧನೆಗಳಿಂದ ಮುಕ್ತಿ ನೀಡುತ್ತದೆ. ಕೊನೆಗೆ ತಲುಪುವುದು ಮಾತ್ರ ನಾಸ್ತಿಕತೆಯತ್ತ. ಮತ್ತೆ ಅಲ್ಲಿಂದ ಹೊರಬರಲು ಸಾಧ್ಯವೇ ಇಲ್ಲ. ಆದ್ದರಿಂದ ಜಾಗೃತರಾಗೋಣ. ಈಮಾನ್‌ ಸಲಾಮತ್‌ಗಾಗಿ ದುಆ ಮಾಡೋಣ...


*✍️ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು*

ಹದೀಸ್‌ ನಿಷೇಧ 2.

 ಹದೀಸ್‌ ನಿಷೇಧ: ದಾರ ಕಡಿದ ಗಾಳಿಪಟವದು!


 ಹೌದು, ಹದೀಸ್‌ ನಿಷೇಧಿಗಳಿಗೆ ಸರಿಯಾದ ತೀರ್ಮಾನಗಳಿಲ್ಲ. ನಿರ್ದಿಷ್ಟ ಗುರಿಯಿಲ್ಲ. ನೀವೇ ನೋಡಿ. "ಜುಮುಆ ನಮಾಝ್‌ಗಾಗಿ ಕರೆಯಲಾದಾಗ ನೀವು ವ್ಯಾಪಾರ ವಹಿವಾಟುಗಳನ್ನು ತೊರೆದು ಅಲ್ಲಾಹನ ಝಿಕ್‌ರ್‌ನೆಡೆಗೆ ಧಾವಿಸಿರಿ" ಎಂದು ಪವಿತ್ರ ಕುರ್‌ಆನ್‌ನಲ್ಲಿ ಹೇಳಲಾಗಿದೆ. *ಓ ಹದೀಸ್‌‌ ನಿಷೇಧಿಗಳೇ ಪ್ರಶ್ನೆಯೇನೆಂದರೆ,* ಜುಮುಆದ ದಿನ ಯಾವ ಸಮಯದಲ್ಲಿ ಕರೆಕೊಡಬೇಕು? ಯಾವ ನಮಾಝ್‌ಗಾಗಿ ಕರೆಯಬೇಕು ಮತ್ತು ಯಾವ ರೀತಿ ಕರೆ ನೀಡಬೇಕು? ಯಾವ ನಮಾಝ್‌ಗಾಗಿ ಕರೆಯಲಾಗುತ್ತಿದೆಯೋ, ಆ ನಮಾಝ್ ಎಷ್ಟು ರಕ‌ಅತ್‌ ಮತ್ತು ಹೇಗೆ ನಿರ್ವಹಿಸ ಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಕುರ್‌ಆನಿನ ಬೆಳಕಿನಲ್ಲಿ ಪರಿಹರಿಸಿ ಕೊಡಲು "ಅಹ್ಲೆಕುರ್‌ಆನ್‌‌" ಎಂಬ ಮುದ್ದಾದ ವೇಷ ತೊಟ್ಟಿರುವ ನಿಮಗೆ ಕುರ್‌ಆನಿನ ಸೂಕ್ತಗಳ ಮೂಲಕ ಉತ್ತರಿಸಲು ಸಾಧ್ಯವೇ? ಈ ಫಿತ್ನವಾದಿಗಳಲ್ಲೇ ಹಲವು ವಿಭಾಗಗಳು. ಮೂರು ಹೊತ್ತಿನ ನಮಾಝಿಗಳೂ ಐದು ಹೊತ್ತಿನ ನಮಾಝಿಗಳೂ ಮತ್ತು ಇದ್ಯಾವುದೂ ಇಲ್ಲವೆಂದೂ ಮನಸ್ಸು ಶಾಂತವಾಗಿದ್ದರೆ, 'ಅದುವೇ ನಮಾಝ್‌, ಅದುವೇ ಉಪವಾಸ, ಅದುವೇ ಹಜ್ಜ್‌' ಎನ್ನುವಷ್ಟೂ ಮಾನಸಿಕ ಅಸ್ವಸ್ಥಕ್ಕೊಳಗಾಗಿದ್ದಾರೆ. ವಾಹನ ಚಲಾಯಿಸುತ್ತಿದ್ದಂತೆಯೇ ನಮಾಝ್‌ ನಿರ್ವಹಿಸುವವರೂ, ರಮಝಾನ್‌ನ ಹಗಲಲ್ಲಿ ಹೊಟ್ಟೆತುಂಬಾ ಮುಕ್ಕುವವರೂ, ಪವಿತ್ರ ಹಜ್ಜ್‌ನ್ನೇ ಅಣಕಿಸುವವರೂ ಅವರಲ್ಲಿದ್ದಾರೆ. ಐದು ಹೊತ್ತಿನ ನಮಾಝ್‌ನಲ್ಲಿ ಕಾಣದವರು ಜುಮಾ ನಮಾಝ್‌ನಲ್ಲಿ ಮಾತ್ರ ಇಣುಕಿ ಹೋಗುವುದರ ಮರ್ಮವೇನು? ಹದೀಸ್‌ ಬೇಡವೆನ್ನುವವರು ನಮಾಝ್‌ ನಿರ್ವಹಿಸಲು ಹೇಗೆ ತಾನೆ ಸಾಧ್ಯ? ಅದೇ ಹೇಳಿದ್ದು. ಹದೀಸ್‌ ನಿಷೇಧಿಗಳಿಗೆ ಸರಿಯಾದ ತೀರ್ಮಾನಗಳಿಲ್ಲ. *ದಾರ ಕಡಿದ ಗಾಳಿಪಟವದು. ಗುರಿಯಿಲ್ಲದ ಅಡ್ಡಾದಿಡ್ಡಿ ಅಲೆದಾಟ.*


ಏಕೆಂದರೆ, ನಮಾಝ್‌ನ ರಕ‌ಅತ್‌, ಅದರ ಕ್ರಮ, ಅದರಲ್ಲಿ ಪಠಿಸುವ ಝಿಕ್‌ರ್‌, ದುಆಗಳು ಮತ್ತು ಉಪವಾಸ ಹಾಗೂ ಹಜ್ಜ್‌ನ ವಿಧಿವಿಧಾನಗಳು ಇದ್ಯಾವುದೂ ಕುರ್‌ಆನಿನಲ್ಲಿಲ್ಲ, ಎಲ್ಲವೂ ಹದೀಸಲ್ಲಿದೆ. ನಿಜವಾಗಿ, ಹದೀಸ್‌ಗಳು ಕುರ್‌ಆನಿನ ವ್ಯಾಖ್ಯಾನಗಳಾಗಿವೆ. *ಆದ್ದರಿಂದ ಈ ಸ್ವ ಘೋಷಿತ ಯುಕ್ತಿವಾದಿಗಳು ಬರೀ ಹದೀಸ್‌ ನಿಷೇಧಿಗಳಲ್ಲ. ಕುರ್‌ಆನ್‌ ನಿಷೇಧಿಗಳು ಕೂಡಾ. ಅಂತಹವರನ್ನು "ಅಹ್ಲೆಕುರ್‌ಆನ್‌" ಎಂದು ಗುರುತಿಸುವುದೇ ತಪ್ಪು. ಕುರ್‌ಆನನ್ನೇ ನಿಷೇಧಿಸುವವರು "ಅಹ್ಲೆಕುರ್‌ಆನ್‌" ಆಗುವುದಾದರೂ ಹೇಗೆ?* (ಶಾಂತಂಪಾಪಂ) ನೀವು ಪವಿತ್ರ ಕುರ್‌ಆನನ್ನು ತೆರೆದು ನೋಡಿ. *ಸ್ವರ್ಗದವರು ನರಕದ ಹೊಂಡದಲ್ಲಿ ಬಿದ್ದು ಚಡಪಡಿಸುವವರೊಂದಿಗೆ ಕೇಳುವ ಪ್ರಶ್ನೆಯೊಂದನ್ನು ಕುರ್‌ಆನ್‌ ಉಲ್ಲೇಖಿಸಿದೆ.* ಮಾ ಸಲಕಕುಮ್ ಫೀ ಸಖರ್‌? ಅಂದರೆ, ಯಾವ ಕಾರಣಕ್ಕಾಗಿ ನೀವು ನರಕ ಯಾತನೆಗೆ ಬಿದ್ದಿರಿ? ಅಲ್ಲಾಹನ ಶಾಪ-ಕ್ರೋಧಕ್ಕೆ ಪಾತ್ರವಾದ ಆ ಅಪರಾಧಿಗಳು ನೀಡುವ ಮೊದಲ ಕಾರಣ, *لَمْ نَكُ مِنَ الْمُصَلِّينَ*

"ನಾವು ನಮಾಝ್ ಮಾಡುವವರಾಗಿರಲಿಲ್ಲ" ಎಂದಾಗಿತ್ತು. ನಮಾಝ್ ಎಂಬುದು ಬಹಳ ಮಹತ್ವದ ಆರಾಧನಾ ಕರ್ಮ. ಅದನ್ನು ಸಮಯಪಾಲನೆಯೊಂದಿಗೆ ಮತ್ತು ಪ್ರವಾದಿವರ್ಯ(ಸ)ರು ಕಲಿಸಿಕೊಟ್ಟ ಕ್ರಮದಂತೆ ನಿರ್ವಹಿಸ ಬೇಕೆಂದು ಸತ್ಯವಿಶ್ವಾಸಿಗಳಿಗೆ ತಾಕೀತು ನೀಡಲಾಗಿದೆ. ಒಟ್ಟಿನಲ್ಲಿ ಕುರ್‌ಆನ್‌ ಮತ್ತು ಹದೀಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಹಿಡಿದು ಮತ್ತೊಂದನ್ನು ತೊರೆಯುವಂತಿಲ್ಲ...

* يَوْمَ تُقَلَّبُ وُجُوهُهُمْ فِي النَّارِ يَقُولُونَ يَا لَيْتَنَا أَطَعْنَا اللَّهَ وَأَطَعْنَا الرَّسُولَا*

ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, "ಅಯ್ಯೋ! ನಾವು ಅಲ್ಲಾಹ್ ಮತ್ತು ಅವನ ರಸೂಲರ ಅನುಸರಣೆ ಮಾಡುತ್ತಿದ್ದರೆ!" ಎನ್ನುವರು. *[ಪವಿತ್ರ ಕುರ್‌ಆನ್‌]*

*وَأَطِيعُوا اللَّهَ وَالرَّسُولَ لَعَلَّكُمْ  تُرْحَمُونَ*


ಮತ್ತು ಅಲ್ಲಾಹನ ಹಾಗೂ ಸಂದೇಶವಾಹಕರ ಆಜ್ಞೆಯನ್ನು ಪಾಲಿಸಿರಿ. ನೀವು ಕೃಪಾರ್ಹರಾಗುವಿರೆಂದು ನಿರೀಕ್ಷಿಸಬಹುದು.

*[ಪವಿತ್ರ ಕುರ್‌ಆನ್‌]*

 *وَمَنْ يُطِعِ اللَّهَ وَالرَّسُولَ فَأُولَٰئِكَ مَعَ الَّذِينَ أَنْعَمَ اللَّهُ عَلَيْهِمْ مِنَ النَّبِيِّينَ وَالصِّدِّيقِينَ وَالشُّهَدَاءِ وَالصَّالِحِينَ ۚ وَحَسُنَ أُولَٰئِكَ رَفِيقًا*


ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸುವವರು ಅಲ್ಲಾಹನಿಂದ ಸಕಲ ಸೌಭಾಗ್ಯಗಳನ್ನು ಹೊಂದಿದ ಪ್ರವಾದಿಗಳ, ಸತ್ಯಸಂಧರ, ಹುತಾತ್ಮರ ಮತ್ತು ಸಜ್ಜನರ ಸಹವಾಸದಲ್ಲಿರುವರು. ಅದೆಂತಹ ಉತ್ತಮ ಸಂಗಾತಿಗಳವರು! *[ಪವಿತ್ರ ಕುರ್‌ಆನ್‌]*


*✍️ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು*

ಹದೀಸ್‌ ನಿಷೇಧ 1.

 ಹದೀಸ್‌ ನಿಷೇಧ:  ಈಮಾನನ್ನೇ ಕೊಳ್ಳೆ ಹೊಡೆಯುವ ಟೀಮ್‌ ಅದು!

ಪವಿತ್ರ ಕುರ್‌ಆನಿನ ಅನೇಕ ಕಡೆಗಳಲ್ಲಿ "ಯಾ ಅಯ್ಯುಹಲ್ಲಝೀನ ಆಮನೂ" ಓ ಸತ್ಯವಿಶ್ವಾಸಿಗಳೇ, ಎಂದು ಮುಅ್‌ಮಿನರನ್ನು ಅಭಿಸಂಬೋಧಿಸಲಾಗಿದೆ. ಓ ಹದೀಸ್‌ ನಿಷೇಧಿಗಳೇ... ಇಲ್ಲಿ ಈಮಾನ್‌ ಎಂದರೇನು? ಮುಅ್‌ಮಿನ್‌ ಅಂದರೆ ಯಾರು? ಆತ ಯಾರ ಮೇಲೆಲ್ಲ ಮತ್ತು ಯಾವುದರ ಮೇಲೆಲ್ಲ ವಿಶ್ವಾಸವಿಡಬೇಕು? ವಾಸ್ತವದಲ್ಲಿ, ಪ್ರವಾದಿವರ್ಯ(ಸ)ರ ಆಜ್ಞಾಪಾಲನೆ ಮಾಡಬೇಕೆಂದು ಪವಿತ್ರ ಕುರ್‌ಆನಿನ ಅನೇಕ ಕಡೆಗಳಲ್ಲಿ ಪದೇಪದೇ ಆದೇಶಿಸಲಾಗಿದೆ. ಹದೀಸ್‌ ನಿಷೇಧಿಗಳ ವಾದದಂತೆ, ಅದೆಲ್ಲವೂ ರಸೂಲರ ಜೀವನ ಕಾಲದಲ್ಲಿ ಮಾತ್ರ ಆಜ್ಞಾಪಾಲನೆ ಮಾಡಿದರೆ ಸಾಕೆಂಬುದು ಕುಫ್ರ್‌ನತ್ತ ಎಳೆದೊಯ್ಯುವ ಸಿದ್ಧಾಂತವಷ್ಟೇ. ವಾಸ್ತವದಲ್ಲಿ ಕುರ್‌ಆನ್‌ ಅಂತಹ ಯಾವುದೇ ಷರತ್ತನ್ನು ನೀಡಿಲ್ಲ. ಬದಲಾಗಿ,
*قُلْ أَطِيعُوا اللَّهَ وَالرَّسُولَ ۖ فَإِنْ تَوَلَّوْا فَإِنَّ اللَّهَ لَا يُحِبُّ الْكَافِرِينَ*
"ಹೇಳಿರಿ: ನೀವು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಅವರೇನಾದರೂ ವಿಮುಖರಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಪ್ರೀತಿಸಲಾರನು." *[ಪವಿತ್ರ ಕುರ್‌ಆನ್‌, 3:32]* ಎಂದು ಎಚ್ಚರಿಸಲಾಗಿದೆ. *ಇಲ್ಲಿ ಅಲ್ಲಾಹ್‌ ಮತ್ತು ರಸೂಲರ ಆಜ್ಞಾಪಾಲನೆಯನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸದೆ, ಜತೆಜತೆಯಾಗಿ ಪ್ರಸ್ತಾಪಿಸಲಾಗಿದೆ. ಸಾಲದ್ದಕ್ಕೆ ರಸೂಲರ ಆಜ್ಞಾಪಾಲನೆ ಮಾಡದವರನ್ನು ಕಾಫಿರರೆನ್ನಲಾಗಿದೆ. ಹದೀಸ್‌ ನಿಷೇಧಿಗಳು ಕಾಫಿರ್‌ಗಳು ಎಂದರ್ಥವಲ್ಲವೇ?* ಒಂದು ವೇಳೆ ರಸೂಲರು ಜನರಿಗೆ ಅಲ್ಲಾಹನ ಆದೇಶಕ್ಕೆ ವಿರುದ್ಧವಾದ ಆದೇಶಗಳನ್ನು ಕೊಡುವ ಸಾಧ್ಯತೆ ಇರುತ್ತಿದ್ದರೆ, ಖಂಡಿತವಾಗಿಯೂ ಅಲ್ಲಾಹನು ಆ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡುತ್ತಿದ್ದನು. ಆದರೆ ಕುರ್‌ಆನ್‌ನಲ್ಲೆಲ್ಲೂ ರಸೂಲರ ಕುರಿತು ಅಂತಹ ಯಾವುದೇ ಸಂಶಯವಾಗಲೀ ಗೊಂದಲಗಳಾಗಲೀ ಇಲ್ಲ. ರಸೂಲರ ವಿರುದ್ಧ ಗೊಂದಲ ಹರಡುವ ಅರ್ಬುದ ರೋಗ ಹದೀಸ್‌ ನಿಷೇಧಿಗಳಿಗೆ ಮಾತ್ರವಿದೆ. ಇದಕ್ಕೆ ತದ್ವಿರುದ್ಧವಾಗಿ ಕುರ್‌ಆನ್‌ನಲ್ಲಿ ಪ್ರವಾದಿ ಮುಹಮ್ಮದ್(ಸ)ರ ಕುರಿತು, "
*وَمَا يَنْطِقُ عَنِ الْهَوَىٰ إِنْ هُوَ إِلَّا وَحْيٌ يُوحَىٰ*
"ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ. ಅದು ಅವರಿಗೆ ನೀಡಲಾಗುವ ವಹ್ಯ್‌(ದಿವ್ಯವಾಣಿ) ಆಗಿದೆ" ಎಂದು ಹೇಳಲಾಗಿದೆ. *[ಪವಿತ್ರ ಕುರ್‌ಆನ್‌, 53:3,4]*
ಇಲ್ಲಿನ ಹದೀಸ್‌ ನಿಷೇಧಿಗಳಂತೆ ಸುಳ್ಳುಗಳನ್ನು ಹರಡಿ, ಕುರ್‌ಆನನ್ನು ತಮಗೆ ತೋಚಿದಂತೆ ದುರ್ವ್ಯಾಖ್ಯಾನಿಸಿ ಜನಸಾಮಾನ್ಯರ ಈಮಾನ್‌ ನಾಶಮಾಡುವ ಪಾಪಕೃತ್ಯವನ್ನು ಪ್ರವಾದಿಗಳೆಂದೂ ಮಾಡಿಲ್ಲ. (ಶಾಂತಂಪಾಪಂ) ಒಟ್ಟಿನಲ್ಲಿ *"ರಸೂಲರ ಆಜ್ಞಾಪಾಲನೆ ಮಾಡಿದವನು, ಅಲ್ಲಾಹನ ಆಜ್ಞಾಪಾಲನೆ ಮಾಡಿದಂತೆ" ಮತ್ತು ಇದಕ್ಕೆ ಸಮಾನವಾದ ಮತ್ತಿತರ ಕುರ್‌ಆನಿನ ಸಂದೇಶಗಳನ್ನು "ಅಹ್ಲೆ ಕುರ್‌ಆನ್‌" ಎಂಬ ವೇಷತೊಟ್ಟಿರುವ ಹದೀಸ್‌ ನಿಷೇಧಿಗಳು ಕಂಡೂ ಕಾಣದಂತೆ ನಟಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲು "ಅಹ್ಲೆ ಕುರ್‌ಆನ್‌" ಎಂಬ ಚಂದದ ಮುಖವಾಡ ಧರಿಸಿ ಬಲೆ ಬೀಸುತ್ತಿದ್ದಾರೆ.* ಒಟ್ಟಿನಲ್ಲಿ ಅಲ್ಲಾಹನು ತನ್ನ ಸಂದೇಶವಾಹಕರನ್ನು ಮಾದರೀ ಪುರುಷರೆಂದು ಘೋಷಿಸಿ, ಅವರ ಬದುಕನ್ನು ಅನುಕರಣಾಯೋಗ್ಯವೆಂದು ಸಾರಿದ್ದಾನೆ. ಅಲ್ಲಾಹನ ಸಂತೃಪ್ತಿ ಹಾಗೂ ಪರಲೋಕ ಮೋಕ್ಷ ಸಂಪಾದಿಸಲು ಹಾತೊರೆಯುವವರ ಮೇಲೆ ಪ್ರವಾದಿವರ್ಯ(ಸ)ರ ಅನುಸರಣೆಯನ್ನು ಕಡ್ಡಾಯಗೊಳಿಸಿದ್ದಾನೆ ಮತ್ತು ಅದರಿಂದ ಮುಖ ತಿರುಗಿಸುವುದು ಕುಫ್ರ್‌ ಎಂದೂ ಮುನ್ನೆಚ್ಚರಿಕೆ ನೀಡಿದ್ದಾನೆ. ಅಲ್ಲಾಹನ ವತಿಯಿಂದ ಅವತೀರ್ಣಗೊಂಡಿರುವ ಆದೇಶಗಳು ಮತ್ತು ನಿಷೇಧಗಳು ಬರೀ ಕುರ್‌ಆನ್‌ನಲ್ಲಿರುವುದು ಮಾತ್ರವಾಗಿರದೆ, ಸ್ವತಃ ಪ್ರವಾದಿವರ್ಯ(ಸ)ರು ಆದೇಶಿಸುವ ಮತ್ತು ಅವರು ನಿಷೇಧಿಸುವ ಕಾರ್ಯಗಳೂ ದೀನುಲ್‌ ಇಸ್ಲಾಮ್‌ನ ಬುನಾದಿಗಳಾಗಿವೆ. ಪವಿತ್ರ ಕುರ್‌ಆನ್‌ ಅದನ್ನೂ ಬೊಟ್ಟು ಮಾಡಿ ಹೇಳಿದೆ:

*وَمَا آتَاكُمُ الرَّسُولُ فَخُذُوهُ وَمَا نَهَاكُمْ عَنْهُ فَانْتَهُوا ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ*
"ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ." *ಪ್ರವಾದಿವರ್ಯ(ಸ)ರಿಗೆ ನೀಡಲಾಗಿರುವ ಈ ಒಂದು ಉತ್ಕೃಷ್ಟ ಸ್ಥಾನಮಾನವನ್ನು ಒಪ್ಪಿಕೊಳ್ಳುವುದು ತಕ್ವಾ(ದೇವಭಯ)ದ ಮಾನದಂಡವಾಗಿದೆ ಮತ್ತು ಅದರಿಂದ ಹಿಂಜರಿಯುವುದು ಅಥವಾ ಅದನ್ನು ನಿರಾಕರಿಸುವುದು ಕಠಿಣ ಶಿಕ್ಷೆಗೆ ಹೇತುವಾಗಲಿದೆಯೆಂದೂ ಎಚ್ಚರಿಕೆ ನೀಡಲಾಗಿದೆ.* ಆದ್ದರಿಂದ ಅಲ್ಲಾಹನ ಧರ್ಮಕ್ಕಾಗಿ ಪ್ರಾಮಾಣಿಕವಾದ ತ್ಯಾಗ ಬಲಿದಾನಗಳನ್ನು ಅರ್ಪಿಸಿ ಹದೀಸನ್ನು ಕ್ರೋಡೀಕರಿಸಿ ಹಸ್ತಾಂತರಿಸಿದ ಜಗದ್ವಿಖ್ಯಾತ ಅಗ್ರಗಣ್ಯ ಮಹದ್ದಿಸ್‌ಗಳಿಗೂ ಕಾಲಘಟ್ಟದ ಕುರ್‌ಆನ್‌ ವ್ಯಾಖ್ಯಾನಕಾರರಿಗೂ ಪರಿಚಯವಿಲ್ಲದ, ಆಧುನಿಕ ಹದೀಸ್ ನಿಷೇಧಿಗಳ ಮೊಂಡುವಾದಗಳು ಅತ್ಯಂತ ಅಪಾಯಕರದ್ದು. ಆದ್ದರಿಂದ ಸಮುದಾಯವೇ, ಹದೀಸ್‌ ನಿಷೇಧಿಗಳ ಶರ್ರ್ ನಿಂದ ಜಾಗರೂಕರಾಗಿರಿ. ಈಮಾನ್‌ ಕಳೆದುಕೊಂಡು ಅಂತಹವರಿಂದ ಕುರ್‌ಆನಿನ ಅರ್ಥ ಅಥವಾ ಗ್ರಾಮರ್‌ ಕಲಿತು ಏನಾಗಲಿಕ್ಕಿದೆ?

*✍️ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು*