17 Jun 2019

ಅಲ್ಲಾಹನು ಯಾರು? 

ಅಲ್ಲಾಹನು ಯಾರು?

ಇದೊಂದು ಕೇವಲ ಪ್ರಶ್ನೆಯಲ್ಲ ಬದಲಾಗಿ ಪ್ರತಿಯೊಬ್ಬನೂ ಅರಿತಿರಬೇಕಾದ ಮಹತ್ತರವಾದ ವಿಷಯವಾಗಿದೆ. ಮಾತ್ರವಲ್ಲ ಅರಿತಂತೆ ವಿಶ್ವಾಸವಿಡುವುದು ಪ್ರತಿಯೊಬ್ಬನಿಗೂ ಕಡ್ಡಾಯವಾಗಿದೆ. ಒಬ್ಬ ದೇವನು ಇದ್ದಾನೆ ಎನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ. ದೇವನನ್ನು ನಿಷೇಧಿಸಿದವರು ಕಾಣದ ಒಂದು ಶಕ್ತಿ ಇದೆ ಎಂದು ವಿಶ್ವಾಸವಿಡದೆ ಜೀವಿಸಿರಲು ಸಾಧ್ಯವೇ ಇಲ್ಲ.

 ಹೌದು ಅವನು ಅಲ್ಲಾಹನು, ಅವನು ಏಕನಾಗಿದ್ದಾನೆ. ಅವನಿಗೆ ಒಂದು ಅಣುವಿನಷ್ಟು ಸಮಾನವಾದ ಒಂದು ಶಕ್ತಿಯಿಲ್ಲ, ಒಂದು ವ್ಯಕ್ತಿಯಿಲ್ಲ, ಒಂದು ವಸ್ತುವಿಲ್ಲ. ಅವನು ಸಕಲ ಸೃಷ್ಟಿಗಳ ಸೃಷ್ಟಿಕರ್ತನೂ, ಮಾಲೀಕನೂ, ಪರಿಪಾಲಕನೂ ಆಗಿದ್ದಾನೆ. ಆರಾಧನೆಗೆ ಅರ್ಹನೂ ಸ್ತುತ್ಯರ್ಹನೂ ಅವನು ಮಾತ್ರವಾಗಿದ್ದಾನೆ. ಅವನು ಮುಸ್ಲಿಮರ ಮಾತ್ರ ದೇವನಲ್ಲ. ಅವನು ಪ್ರತಿಯೊಂದು ಸೃಷ್ಟಿಯ ದೇವನಾಗಿದ್ದಾನೆ.

 ಅಲ್ಲಾಹು ಎಂದರೆ ಅರಬಿಯಲ್ಲಿ ಅಲ್ಇಲಾಹ್ ಎಂದಾಗಿದೆ. ಇಲಾಹ್ ಎಂದರೆ ಆರಾಧ್ಯ. ಇಲಾಹ್ ನೊಂದಿಗೆ ಅಲ್ ಸೇರುವಾಗ ಅದು ಆರಾಧ್ಯನ ಏಕತ್ವವನ್ನು ಸೂಚಿಸುತ್ತದೆ. ಎಂದರೆ ಆರಾಧನೆಗೆ ಅರ್ಹನು ಅಲ್ಲಾಹನು ಮಾತ್ರ ಎಂದಾಗಿದೆ.

 ಅವನು ಇಡೀ ಪ್ರಪಂಚವನ್ನೂ, ಪ್ರಪಂಚದಲ್ಲಿರುವ ಏಕ ಕೋಶ ಜೀವಿ ಹಮೀಬಾದಿಂದ ಹಿಡಿದು ಬಹುಕೋಶ ಜೀವಿಯಾದ ನೀಲ ತಿಮಿಂಗಿಲದ ವರೆಗಿನ ಎಲ್ಲಾ ಜೀವ ರಾಶಿಗಳನ್ನು ಸೃಷ್ಟಿಸಿ ಪರಿಪಾಲಿಸುವವನೂ, ಇಡೀ ಜಗತ್ತಿನ ನಿಯಂತ್ರಕನೂ, ಎಲ್ಲಾ ರಾಜರಿಗೂ ರಾಜನೂ, ಜಗದೀಶ್ವರನೂ, ಸರ್ವ ಶಕ್ತನೂ ಆದ ಸಾಕ್ಷಾತ್ ದೇವನಾಗಿದ್ದಾನೆ ಅಲ್ಲಾಹನು.   

✍️ Abu Muadh

ಇಬಾದತ್‌ನ ಹೆಸರಲ್ಲಿ ಗಂಟಲು ಬಿರಿಯುವಂತೆ ಬೊಬ್ಬಿಡುವುದರ ಕುರಿತು ಮತ್ತಷ್ಟು...!

ಇಬಾದತ್‌ನ ಹೆಸರಲ್ಲಿ ಗಂಟಲು ಬಿರಿಯುವಂತೆ ಬೊಬ್ಬಿಡುವುದರ ಕುರಿತು ಮತ್ತಷ್ಟು...!

ಹ. ಅಬೂಮೂಸಾ(ರ) ಹೇಳುತ್ತಾರೆ: "ನಾವು ಪ್ರವಾದಿವರ್ಯ(ಸ)ರ ಜತೆಗಿದ್ದೆವು. ಯಾವುದಾದರೂ ಎತ್ತರದ ಸ್ಥಳಕ್ಕೆ ಹೋದಾಗ ಉಚ್ಚ ಸ್ವರದಲ್ಲಿ 'ಲಾ ಇಲಾಹ ಇಲ್ಲಲ್ಲಾಹ್' ಮತ್ತು 'ಅಲ್ಲಾಹು ಅಕ್ಬರ್' ಎಂದು ಹೇಳುತ್ತಿದ್ದೆವು. ಅದನ್ನು ಕೇಳಿ ಪ್ರವಾದಿ(ಸ) ಹೇಳಿದರು: "ಜನರೇ, ಮೆಲ್ಲನೆ ಹೇಳಿರಿ. ಏಕೆಂದರೆ ನೀವು ಕಿವುಡನನ್ನೋ, ಮರೆಯಲ್ಲಿರುವವನನ್ನೋ ಕರೆಯುವುದಲ್ಲ. ನಿಶ್ಚಯವಾಗಿಯೂ ಅವನು ನಿಮ್ಮ ಜೊತೆಗಿದ್ದಾನೆ. ಅವನು ಎಲ್ಲವನ್ನೂ ಆಲಿಸುತ್ತಾನೆ ಮತ್ತು ನಿಮಗೆ ಅತೀ ಸಮೀಪವಿದ್ದಾನೆ. ಅವನ ನಾಮ ಪರಿಶುದ್ಧವಾಗಿದೆ. ಅವನ ಮಹತ್ವ ಸರ್ವೋನ್ನತವಾಗಿದೆ.'' (ಸಹೀಹುಲ್ ಬುಖಾರಿ)

 ಹೌದು! ತಕ್ಬೀರ್, ತಹ್ಲೀಲ್ ಅಥವಾ ಝಿಕ್‌ರ್‍‌ನ ಹೆಸರಲ್ಲಿ ಬೊಬ್ಬೆ-ಗದ್ದಲ ಅಲ್ಲಾಹನ ರಸೂಲರಿಗೆ(ಸ) ತೀರಾ ಇಷ್ಟವಿಲ್ಲವೆಂದು ಹದೀಸ್‌ನ ಗ್ರಂಥಗಳಿಂದ ಅರ್ಥವಾಗುತ್ತದೆ. ಜಗತ್ತಿನ ನಾಯಕ ಮುಹಮ್ಮದ್(ಸ)ರ ನಿಲುವು ಬಹಳ ಅಚಲ. ನಮಾಝ್‌ ದೀನುಲ್ ಇಸ್ಲಾಮ್‍ನ ಅತೀ ಮಹತ್ವದ ಆರಾಧನಾ ಕರ್ಮವಾಗಿದೆ. ಅದನ್ನು ನಿರ್ವಹಿಸದವರು ಯಾರೂ ಮುಸ್ಲಿಮರಾಗಲು ಸಾಧ್ಯವಿಲ್ಲ. ನರಕದಿಂದ ಮುಕ್ತಿ ಮತ್ತು ಸ್ವರ್ಗ ಪ್ರಾಪ್ತಿಗೆ ಅದು ಅನಿವಾರ್ಯ. ನಮಾಝ್ ಅಲ್ಲಾಹನೊಂದಿಗಿನ ಖಾಸಗಿ ಸಂಭಾಷಣೆ ಎಂಬುದೂ ಸತ್ಯ! ಆದರೆ‌ ಮಹತ್ವಪೂರ್ಣ ಮತ್ತು ಅತೀ ವಿಶಿಷ್ಟವಾದ ಈ ಆರಾಧನೆಯಲ್ಲೂ ಕುರ್‌ಆನ್‌‌ ಉಚ್ಛಸ್ವರದಲ್ಲಿ ಪಠಿಸದೆ ಮಧ್ಯಮವಾಣಿಯೊಂದಿಗೆ ಪಠಿಸಬೇಕೆಂಬ ಆಜ್ಞೆಯೂ ಇದೆ. ಮಾತ್ರವಲ್ಲ, ಪುಟ್ಟ ಮಗುವಿನ ಅಳು ಕೇಳಿದರೆ ನಮಾಝ್‌ ದೀರ್ಘಗೊಳಿಸದೆ ಸಂಕ್ಷಿಪ್ತಗೊಳಿಸಬೇಕೆಂಬುದೂ ದೀನುಲ್‌ ಇಸ್ಲಾಮಿನ ಆದೇಶ. ಏಕೆಂದರೆ, "ಮಗುವಿನ ತಾಯಿಗೆ ಮಾನಸಿಕ ತೊಂದರೆ ಆದೀತು'' ಎಂಬ ಆತಂಕ ಪ್ರವಾದಿವರ್ಯ(ಸ)ರದ್ದು. ಒಟ್ಟಿನಲ್ಲಿ ಇಸ್ಲಾಮಿನ ಆರಾಧನಾ ಕರ್ಮಗಳು ಕೂಡಾ ಮಾನವೀಯತೆಯ ಉದಾತ್ತ ಅಂಶಗಳನ್ನೊಳಗೊಂಡಿದೆ ಎಂಬುದೂ ಅಷ್ಟೇ ಸತ್ಯ. ಆರಾಧನೆಯಲ್ಲೂ ಪ್ರವಾದಿವರ್ಯರ(ಸ) ಮಾನವೀಯ ಚಿಂತನೆ ಬೆರಗುಗೊಳಿಸುವಂತಹದ್ದು.

 ಆದರೆ, ಮುಸ್ಲಿಮ್‌ ಸಮುದಾಯ ಇದನ್ನು ಅರಿತಂತಿಲ್ಲ! ಇಂದು ನಮ್ಮ ಪರಿಸರದ ಕೆಲವು ಮಸೀದಿಗಳಿಂದ ಝಿಕ್‌ರ್‌ನ ಹೆಸರಲ್ಲಿ, ಪ್ರವಾದಿ ಪ್ರೇಮದ ಹೆಸರಲ್ಲಿ ಅಥವಾ ಆಚಾರದ ಹೆಸರಲ್ಲಿ ಬಹಳಷ್ಟು ಅನಾಚಾರಗಳು, ಬೊಬ್ಬೆ, ಹಾಡು, ಸಂಗೀತ, ರಸ್ತೆ ತಡೆ, ಹೊರೆಕಾಣಿಕೆ, ಅರಚಾಟ, ದೊಣ್ಣೆ-ರಾಡ್‌ ಬೀಸುವಿಕೆ(ತಾಲೀಮು) ಇತ್ಯಾದಿ ಕಂಡು ಬರುತ್ತಿದೆ. ಅಲ್ಲಾಹು ಅಲ್ಲಾಹು ಅಲ್ಲಾಹು... ಹೂ ಹೂ ಯಾ ಮನ್‌ ಹೂ... ಹಾ ಹು ಹಿ... ಮುಂತಾಗಿ ಗಂಟಲು ಬಿರಿಯುವಂತೆ ಬೊಬ್ಬಿಡುವ ಈ ಚಿತ್ರವಿಚಿತ್ರ ಝಿಕ್ರ್‌ಗಳನ್ನು ನಮ್ಮ ಪುರೋಹಿತರುಗಳು ಎಲ್ಲಿಂದ ಹೊತ್ತು ತಂದಿದ್ದಾರೋ? ಯಾಕೆ ಈ ರೀತಿ ಅರಚುತ್ತಾರೋ ಒಂದೂ ಅರ್ಥವಾಗುತ್ತಿಲ್ಲ. *ಆಧ್ಯಾತ್ಮಿಕ ಶೋಷಣೆಯನ್ನು ಪ್ರಶ್ನಿಸಿದರೆ ಕೈಲಾಗದವ ಮೈ ಪರಚಿಕೊಂಡಂತೆ, ಪುರೋಹಿತನೋರ್ವ ವ್ಯಕ್ತಿ ತೇಜೋವಧೆ ನಡೆಸಿ ಏನೇನೋ ಒದರುತ್ತಾನೆ. ಹುಚ್ಚಾಪಟ್ಟೆ ವರ್ತಿಸುವುದಕ್ಕೆ ಇಬಾದತ್‌ ಎನ್ನಲಾಗುವುದೇ? ಮಾತ್ರವಲ್ಲ ಈ ಬೊಬ್ಬೆಗಳಿಂದ ನಾವು ಇಸ್ಲಾಮಿನ ಯಾವ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದ್ದೇವೆ? ಬೊಬ್ಬೆಗಳಿಂದ ಅಲ್ಲಾಹನ ಸಾಮೀಪ್ಯ ಗಳಿಸಲು ಸಾಧ್ಯವೇ?* ಮಸೀದಿಯ ಆಡಳಿತ ಕಮಿಟಿ ಗಂಭೀರವಾಗಿ ಚಿಂತಿಸಬೇಕು. ಏಕೆಂದರೆ, ಹೆಚ್ಚಿನ ಮಸೀದಿಗಳಲ್ಲಿರುವ ಉಸ್ತಾದ್‌-ಖತೀಬರುಗಳು ಊರಿನವರಲ್ಲ ಪರವೂರಿನವರಾಗಿರುತ್ತಾರೆ. ನಮ್ಮ ಪರಿಸರದ ಪ್ರೀತಿ-ವಿಶ್ವಾಸ-ಸೌಹಾರ್ದತೆಯನ್ನು ಮತ್ತಷ್ಟು ಬೆಳಗಿಸುವಲ್ಲಿ ಮಸೀದಿಗಳ ಪಾತ್ರವೂ ಬಹಳ ಮಹತ್ತರವಾದುದು. ನಿಜವಾಗಿ ಪ್ರವಾದಿವರ್ಯರಾಗಲೀ(ಸ), ಸ್ವಹಾಬತ್‌ಗಳಾಗಲಿ ಕಲಿಸಿ ಕೊಡದ ಮತ್ತು ಸಮುದಾಯದ ಪುರೋಹಿತರು ಸ್ವಯಂ ಹೆಣೆದ ಅನಾಚಾರಗಳಿವು. ಭಕ್ತಿಯ ಹೆಸರಲ್ಲಿ ಮಸೀದಿಯ ಮಿನಾರಗಳಿಂದ ಹಾಗೆ ಅರಚುವಾಗ, ಅದೇ ಮಸೀದಿಯ ಪಕ್ಕದ ಮನೆಗಳಲ್ಲಿ ಸಣ್ಣಪುಟ್ಟ ಮಕ್ಕಳು, ರೋಗಿಗಳು, ಅಶಕ್ತರು, ವೃದ್ಧರಿರುತ್ತಾರೆ. ಯಾರೂ ಅವರನ್ನು ಗಮನಿಸುತ್ತಿಲ್ಲ. ಮುಸ್ಲಿಮೇತರ ಸಹೋದರರ ಮನೆಗಳೂ ಮಸೀದಿಯ ಅಕ್ಕಪಕ್ಕದಲ್ಲಿರುತ್ತವೆ. ಆ ಸಂದರ್ಭಗಳಲ್ಲಿ ಅವರನುಭವಿಸುವ ಮಾನಸಿಕ ಅವಸ್ಥೆಯನ್ನೊಮ್ಮೆ ಊಹಿಸಿ ನೋಡಿ! ಆದ್ದರಿಂದ ಐದು ಹೊತ್ತಿನ ಸುಶ್ರಾವ್ಯ ಅಝಾನ್‍ಗೆ ಹೊರತಾದ ಯಾವುದೇ ಕರ್ಕಶ ಅರಚಾಟ-ಬೊಬ್ಬೆಗಳು ಮಸೀದಿಯ ಮಿನಾರಗಳಿಂದ ಮುಂದೆಂದೂ ಬಾರದಿರಲಿ! ಈ ವಿಷಯದಲ್ಲಿ ಮಸೀದಿ ಕಮಿಟಿಗಳು ಪ್ರತ್ಯೇಕ ಗಮನ ಹರಿಸಬೇಕು. ನಾವೆಲ್ಲ ಒಂದು ಬಹು ಸಂಸ್ಕೃತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ. ಒಟ್ಟು ಸಮಾಜದ ಹಾಗುಹೋಗುಗಳನ್ನು ಮತ್ತು ಭವಿಷ್ಯದ ಸವಾಲುಗಳನ್ನು ಗಮನಿಸುವ ದೂರದೃಷ್ಟಿ ನಮ್ಮಲ್ಲಿರ ಬೇಕು. ನಾವೆಂದೂ ಸಮಸ್ಯೆಗಳನ್ನು ಸೃಷ್ಟಿಸುವವರಾಗ ಬಾರದು. ನಾವು ಇತರರಂತಲ್ಲ, "ಖೈರ ಉಮ್ಮತ್" ಅತ್ತ್ಯುತ್ತಮ ಸಮುದಾಯದವರು, ಸಮಾಜಕ್ಕೆ ಮಾದರಿಗಳಾಗ ಬೇಕಾದವರಲ್ಲವೇ?...

✍ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು