26 Oct 2016

ಅಲ್ಲಾಹನು ಮುಸ್ಲಿಮರಿಗೆ ಮಾತ್ರ ಸೀಮಿತವೇ?



ಅಲ್ಲಾಹು ಮುಸ್ಲಿಮರಿಗೆ ಮಾತ್ರ ದೇವರಲ್ಲ. ಅಲ್ಲಾಹು! ಈ ಹೆಸರು ಕೇಳಿದೊಡನೆ ಹೆಚ್ಚಿನವರೂ ಅದು ಮುಸ್ಲಿಮರ ದೇವರು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ಮುಸ್ಲಿಮರೆಂದರೆ ಅಲ್ಲಾಹನನ್ನು ಮಾತ್ರ ಆರಾಧಿಸುವವರು ಎಂಬುದು ಸತ್ಯವಾಗಿದ್ದರೂ, ಅಲ್ಲಾಹು ಎಂಬುದು ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ಭಾವನೆ ಸರ್ವಥಾ ಸರಿಯಲ್ಲ. ಯಾಕೆಂದರೆ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾದ ಕುರ್‌ಆನ್, ಅಲ್ಲಾಹನನ್ನು ಪರಿಚಯಿಸುವಾಗ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ರೀತಿಯಲ್ಲಿ ಪರಿಚಯಿಸುವುದಿಲ್ಲ. ಅಲ್ಲಾಹನನ್ನು ಕುರಿತು ಪ್ರತಿಪಾದಿಸಿದ ಪ್ರವಾದಿಗಳಾರೂ ಅವನನ್ನು ಮುಸ್ಲಿಮರಿಗೆ ಮಾತ್ರ ಮೀಸಲುಗೊಳಿಸಲಿಲ್ಲ. ಅಂತಹ ಒಂದು ಸಂಕುಚಿತ ಭಾವನೆಯು ಯಾವನೇ ಒಬ್ಬ ಮುಸ್ಲಿಮನಿಗೆ ಇದ್ದರೆ ಅದು ಅವನ ಅಜ್ಞಾನವನ್ನಷ್ಟೇ ಸೂಚಿಸುತ್ತದೆ.
ಅಲ್ಲಾಹು ಎಂಬ ಪದಕ್ಕೆ ಕನ್ನಡದಲ್ಲಿ ದೇವರು ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ God ಎನ್ನಲಾಗುತ್ತದೆ. ಉರ್ದುವಿನಲ್ಲಿ ಖುದಾ ಎನ್ನಲಾಗುತ್ತದೆ. ಮಲಯಾಲದಲ್ಲ ದೈವಂ, ತಮಿಳಿನಲ್ಲಿ ಕಡವುಲ್ ಎನ್ನಲಾಗುತ್ತದೆ. ಆದರೆ ಇವುಗಳಾವುದೂ ಅಲ್ಲಾಹ್ ಎಂಬ ಪದಕ್ಕೆ ಸಮರ್ಪಕವಾಗಿ ಸರಿಹೊಂದಲಾರದು. ದೇವ, God, ಖುದಾ, ದೈವಂ, ಕಡವುಲ್ ಇವುಗಳೆಲ್ಲವೂ ಕೇವಲ ಆರಾಧ್ಯ ಎಂಬ ಅರ್ಥವನ್ನಷ್ಟೇ ಸೂಚಿಸುತ್ತವೆ. ಆರಾಧ್ಯ ಎಂಬುದಕ್ಕೆ ಅರಬಿ ಭಾಷೆಯಲ್ಲಿ ಇಲಾಹ್ ಅಥವಾ ಮಅಬೂದ್ ಎಂಬ ಪದವನ್ನು ಬಳಸಲಾಗುತ್ತದೆ. ಆರಾಧಿಸಲ್ಪಡುವ ಯಾವುದೇ ವಸ್ತು ಕೂಡ ಅರಬಿಯಲ್ಲಿ ಇಲಾಹ್ ಆಗಿ ಮಾರ್ಪಡುತ್ತದೆ. ಆದರೆ ಅಲ್ಲಾಹ್ ಎಂಬ ಅರಬಿ ಪದವು ಸಾಕ್ಷಾತ್ ದೇವನು, ನೈಜ ಆರಾಧ್ಯನು, ಆರಾಧನೆಗೆ ಅರ್ಹನಾಗಿರುವವನು ಎಂಬ ಅರ್ಥಗಳನ್ನು ಹೊಂದಿವೆ.
ಆದ್ದರಿಂದ ಅಲ್ಲಾಹ್ ಎಂಬುದು ಯಾವುದೇ ಕುಲದೇವನ ನಾಮವಲ್ಲ. ಒಂದು ಜನಾಂಗದ ಆರಾಧ್ಯನಿಗೆ ಮಾತ್ರ ಸೀಮಿತವಾದ ಹೆಸರಲ್ಲ. ಸೃಷ್ಟಿಕರ್ತನೂ, ಸರ್ವಶಕ್ತನೂ, ಜಗತ್ತಿನ ನಿಯಂತ್ರಕನೂ, ಪರಿಪಾಲಕನೂ ಆದ ನೈಜ ಆರಾಧ್ಯನನ್ನು ಸೂಚಿಸಲು ಕುರ್‌ಆನ್‌ನಲ್ಲಿ ಅಲ್ಲಾಹ್ ಎಂಬ ಪದವನ್ನು ಬಳಸಲಾಗಿದೆ. ಅಂದರೆ ಭಾಷೆ, ವರ್ಗ, ವರ್ಣ, ಜಾತಿ, ದೇಶ ಎಂಬ ಯಾವುದೇ ಬೇಧಭಾವವಿಲ್ಲದೆ ಸರ್ವ ಜನರ, ಸಕಲ ವಸ್ತುಗಳ, ಸರ್ವ ಪ್ರಪಂಚಗಳ ಸೃಷ್ಟಿಕರ್ತ, ಸಂರಕ್ಷಕ, ನೈಜ ಒಡೆಯನನ್ನು ಕುರ್‌ಆನ್ ಅಲ್ಲಾಹ್ ಎಂದು ಕರೆಯುತ್ತದೆ.

*ಅಲ್ಲಾಹು ಸಕಲ ವಸ್ತುಗಳ ಸೃಷ್ಟಿಕರ್ತನಾಗಿರುವನು, ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿರುವನು. (ಕುರ್‌ಆನ್ 39/62)*

ಕುರ್'ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?



    ಕುರ್‌ಆನ್‌ನ ಸೂಕ್ತಿಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಿಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ.
2ನೇ ಅಧ್ಯಾಯದ 190-191ನೇ ಸೂಕ್ತಿಗಳು ಹೀಗಿವೆ:
ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ನೀವು ಹದ್ದುಮೀರದಿರಿ. ಖಂಡಿತವಾಗಿಯೂ ಹದ್ದುಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದರೋ ಅಲ್ಲಿಂದ ನೀವೂ ಅವರನ್ನು ಹೊರಗಟ್ಟಿರಿ. ಕ್ಷೋಭೆಯು ಕೊಲೆಗಿಂತಲೂ ಭೀಕರವಾಗಿದೆ. ಆದರೆ ಮಸ್ಜಿದುಲ್ ಹರಾಮ್‌ನ ಬಳಿಯಲ್ಲಿ ಅವರು ನಿಮ್ಮೊಂದಿಗೆ ಹೋರಾಡುವವರೆಗೆ ನೀವು ಅವರೊಂದಿಗೆ ಹೋರಾಡದಿರಿ. ಅವರೇನಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕೊಂದು ಬಿಡಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು. (2/190-191)
ಮೊದಲ ವಚನಗಳಲ್ಲಿ ಶತ್ರುಗಳು ಮುಸ್ಲಿಮರ ವಿರುದ್ಧ ದಾಳಿ ನಡೆಸುವಾಗ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಬಳಿಕ ಒಂದು ವೇಳೆ ಶತ್ರುಗಳು ಶಾಂತಿಪ್ರಸ್ತಾಪವನ್ನು ಮುಂದಿಟ್ಟರೆ ಅದನ್ನು ಸ್ವೀಕರಿಸಬೇಕೆಂದು ಆ ಬಳಿಕದ ಸೂಕ್ತಿಯಲ್ಲಿ ಕುರ್‌ಆನ್ ಕಲಿಸುತ್ತದೆ:
ಅವರೇನಾದರೂ (ಯುದ್ಧವನ್ನು) ಸ್ಥಗಿತಗೊಳಿಸಿದರೆ ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. ಗಲಭೆಯು ಇಲ್ಲದಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗಾಗುವವರೆಗೆ ಅವರೊಂದಿಗೆ ಹೋರಾಡಿರಿ. ಅವರೇನಾದರೂ ಸ್ಥಗಿತಗೊಳಿಸಿದರೆ ಆಗ ಅಕ್ರಮಿಗಳ ಹೊರತು ಯಾರ ಮೇಲೂ ಹಗೆತನವನ್ನು ಇಟ್ಟುಕೊಳ್ಳದಿರಿ. (2/192-193)

ಅದೇ ರೀತಿ 9ನೇ ಅಧ್ಯಾಯದ 5ನೇ ಸೂಕ್ತಿಯಲ್ಲಿ ಹೀಗಿದೆ:
ಪವಿತ್ರ ತಿಂಗಳುಗಳು ಕಳೆದರೆ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ, ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚುಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಝನ್ನು ಸಂಸ್ಥಾಪಿಸಿ ಝಕಾತ್ ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. (9/5)
ವಿಮರ್ಶಕರು ಆರಿಸಿಕೊಳ್ಳುವ ವಧಾ ಸೂಕ್ತಿಗಳು ಕುರ್‌ಆನಿನಲ್ಲಿ ಇರುವುದು ಈ ಮೇಲೆ ಹೇಳಿದ ರೀತಿಯಾಗಿದೆ. ಈಗ ಈ ಸೂಕ್ತಿಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.
2ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಸೂಕ್ತಿಯು ನಿರಂತರ ದೌರ್ಜನ್ಯಕ್ಕೀಡಾದ ಬಳಿಕ ಮುಸ್ಲಿಮರಿಗೆ ದೊರಕಿದ ಮೊತ್ತಮೊದಲ ಯುದ್ಧಾನುಮತಿಯಾಗಿದ್ದರೆ 9ನೇ ಅಧ್ಯಾಯದಲ್ಲಿರುವ ಸೂಕ್ತಿಗಳು ಅಂದು ಮುಸ್ಲಿಮರು ಮತ್ತು ಬಹುದೇವಾರಾಧಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಬಹುದೇವಾರಾಧಕರು ಕರಾರಿನ ಶರತ್ತುಗಳನ್ನು ಉಲ್ಲಂಘಿಸಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಅವರಿಗೆ ಕಾಲಾವಕಾಶವನ್ನು ನೀಡಲಾಯಿತು. ಅನ್ಯಥಾಃ ಅವರ ಮೇಲೆ ಯುದ್ಧ ಘೋಷಿಸಲಾಗುವುದೆಂದು ಸಾರಲಾಯಿತು.
ಇವೆರಡು ಸೂಕ್ತಿಗಳೂ ಅವತೀರ್ಣಗೊಂಡಿದ್ದು ಯುದ್ಧದ ಹಿನ್ನೆಲೆಯಲ್ಲಾಗಿತ್ತು. ಒಂದು ದೇಶವು ಯುದ್ಧನಿರತವಾಗಿರುವ ಸಂದರ್ಭದಲ್ಲಿ ಆ ದೇಶವು ಅಥವಾ ಅದರ ಸೇನಾಧಿಪತಿಯು ತನ್ನ ಸೈನಿಕರನ್ನು ಹುರಿದುಂಬಿಸುವುದಕ್ಕಾಗಿ ನೀವು ಶತ್ರುಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಆದೇಶಿಸುವುದನ್ನು ಭಯೋತ್ಪಾದನೆಗೆ ಪ್ರೇರಣೆಯೆಂದು ಕರೆಯಲಾದೀತೇ? ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧ ನಡೆಯುವಾಗ ನಮ್ಮ ಸೇನಾಧಿಪತಿಯು ಪಾಕಿಸ್ಥಾನಿ ಸೈನಿಕರನ್ನು ಕಂಡಲ್ಲಿ ವಧಿಸಿರಿ ಎಂದು ನಮ್ಮ ಸೈನಿಕರಿಗೆ ಆದೇಶಿಸಿದರೆ ಅದು ಪಾಕಿಸ್ಥಾನಿಗಳ ಮೇಲೆ ಭಯೋತ್ಪಾದನೆ ನಡೆಸುವುದಕ್ಕೆ ಪುರಾವೆಯಾದೀತೇ? ಅದೇ ರೀತಿ ಅಮೆರಿಕ ಮತ್ತು ವಿಯಟ್ನಾಂ ಮಧ್ಯೆ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಅಮೆರಿಕನ್ ಸೇನಾ ಮುಖ್ಯಸ್ಥರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದಿದ್ದನ್ನು ಇಂದು ಯಾರಾದರೂ ಯುದ್ಧದ ಹಿನ್ನೆಲೆಯನ್ನು ಮರೆಮಾಚಿಕೊಂಡು ಹೇಳಿದಲ್ಲಿ ಖಂಡಿತವಾಗಿಯೂ ಅದು ಅಮೆರಿಕನ್ ಸೇನಾ ಮುಖ್ಯಸ್ಥರನ್ನು ಒಬ್ಬ ಭಯೋತ್ಪಾದಕ ಅಥವಾ ಕಟುಕನಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುರ್‌ಆನ್‌ನಲ್ಲಿರುವ ವಧಾ ಸೂಕ್ತಿಗಳನ್ನು ಇಸ್ಲಾಮಿನ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅರುಣ್ ಶೌರಿಯೂ ಒಬ್ಬರು. ತಮ್ಮ ದಿ ವರ್ಲ್ಡ್ ಆಫ್ ಫತ್ವಾಸ್ (The World of Fatwas) ಎಂಬ ಗ್ರಂಥದಲ್ಲಿ ಅವರು ಕುರ್‌ಆನಿನ 9ನೇ ಅಧ್ಯಾಯದ ಇದೇ 5ನೇ ಸೂಕ್ತಿಯನ್ನೇ ಆರಿಸಿರುವರು.
ನೀವು ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ (ಕುರ್ ಆನ್ 9/5)
ತಮಾಷೆಯೆಂದರೆ ಅವರು 5ನೇ ಸೂಕ್ತಿಯ ಬಳಿಕ 6ನೇ ಸೂಕ್ತಿಯನ್ನು ಉಲ್ಲೇಖಿಸದೇ ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಕಾರಣವೇನೆಂದರೆ 6ನೇ ಸೂಕ್ತಿಯಲ್ಲಿ ವಿಮರ್ಶಕರ ದುರ್ವಾದಗಳಿಗೆ ಸಮರ್ಪಕವಾದ ಉತ್ತರವಿದೆ. ಆ ಸೂಕ್ತಿಯಲ್ಲಿ ಅಲ್ಲಾಹು ತನ್ನ ಪ್ರವಾದಿಯೊಂದಿಗೆ ಹೀಗೆ ಆದೇಶಿಸುತ್ತಾನೆ.
ಬಹುದೇವಾರಾಧಕರ (ಶತ್ರುಗಳ) ಪೈಕಿ ಯಾರಾದರೂ ನಿನ್ನೊಂದಿಗೆ ಆಶ್ರಯವನ್ನು ಬೇಡಿದರೆ ಅವನಿಗೆ ಆಶ್ರಯ ನೀಡು. ಅವನು ಅಲ್ಲಾಹನ ವಚನವನ್ನು ಕೇಳುವಂತಾಗಲಿ. ನಂತರ ಅವನನ್ನು ಅವನಿಗೆ ಅತ್ಯಂತ ಸುರಕ್ಷಿತವಾಗಿರುವ ಸ್ಥಳಕ್ಕೆ ತಲುಪಿಸು. ಅದು ಯಾಕೆಂದರೆ ಅವರು ತಿಳುವಳಿಕೆಯಿಲ್ಲದ ಜನತೆಯಾಗಿರುವುದರಿಂದಾಗಿದೆ. (9/6)
ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಸೈನಿಕನನ್ನು ಸ್ವತಂತ್ರವಾಗಿ ಓಡಿಹೋಗಲಷ್ಟೇ ಬಿಡುವನು. ಆದರೆ ಅವನನ್ನು ಸುರಕ್ಷಿತ ತಾಣಕ್ಕೆ ತಲಪಿಸಿರಿ ಎಂಬ ಆಜ್ಞೆಯನ್ನು ಎಂದೂ ನೀಡಲಾರ. ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ. ಕುರ್‌ಆನ್ ಜಗತ್ತಿಗೆ ಶಾಂತಿ, ಕರುಣೆಯ ಪಾಠವನ್ನು ಕಲಿಸಲು ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದಲೇ ಅದು ಶತ್ರುವನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸರಿ ಎಂದು ಆದೇಶಿಸುತ್ತದೆ. ಕುರ್‌ಆನ್ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುವಾಗ ವಿಮರ್ಶಕರು ಈ ವಚನದ ಹತ್ತಿರ ಕೂಡಾ ಸುಳಿಯುವುದಿಲ್ಲವೆಂಬುದು ಆಶ್ಚರ್ಯಕರವಾಗಿದೆ.
ಇನ್ನು ಇಂದು ಮುಸ್ಲಿಮರ ಪೈಕಿ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತರಾದವರಿಗೆ ಮುಸ್ಲಿಮೇತರರನ್ನು ವಧಿಸಲು ಕುರ್‌ಆನ್ ನಲ್ಲಿರುವ ಇಂತಹ ಸೂಕ್ತಿಗಳೇ ಪ್ರೇರಣೆ ಎಂಬ ಆರೋಪದ ಕುರಿತು ಹೇಳುವುದಾದರೆ ಇದೊಂದು ಶುದ್ಧ ಸುಳ್ಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿಯಾಗಿದೆ. ಜಗತ್ತಿನಲ್ಲಿರುವ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎಂಬಂತೆ ಬಿಂಬಿಸಲು ಅವರು ನಡೆಸುತ್ತಿರುವ ವಿಫಲ ಯತ್ನವಾಗಿದೆ. ಇದಕ್ಕಾಗಿ ಅವರು ಒಂದು ವಿಶೇಷ ಘೋಷಣೆಯನ್ನೇ ಸೃಷ್ಟಿಸಿಕೊಂಡಿರುವರು. ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದೊಂದು ಶುದ್ಧ ವಂಚನೆ. ವಾಸ್ತವಿಕವಾಗಿ ಇಂದು ಎಷ್ಟು ಸ್ಪೋಟ ಪ್ರಕರಣಗಳನ್ನು ನಾವು ಪತ್ರಿಕೆಗಳಲ್ಲಿ ಮುಸ್ಲಿಮ್ ಭಯೋತ್ಪಾದನೆಯೆಂಬ ಶೀರ್ಷಿಕೆಯಲ್ಲಿ ಕಾಣುತ್ತಿರುವೆವೋ ಅವಕ್ಕಿಂತ ಎಷ್ಟೋ ಅಧಿಕ ಸಂಖ್ಯೆಯ ಸ್ಪೋಟ ಪ್ರಕರಣಗಳೂ, ಸಾವು ನೋವುಗಳೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. ವ್ಯತ್ಯಾಸವೆಂದರೆ ಇವುಗಳನ್ನು ವೈಭವೀಕರಿಸಲಾಗುತ್ತಿಲ್ಲ. ಭಯೋತ್ಪಾದನೆ, ಆತ್ಮಾಹುತಿ ಬಾಂಬ್ ದಾಳಿ ಎಂಬ ಭೂತಗಳನ್ನು ಹುಟ್ಟು ಹಾಕಿದವರು ಮುಸ್ಲಿಮರು ಎಂಬ ತಪ್ಪುಕಲ್ಪನೆಯು ಪ್ರಚಲಿತದಲ್ಲಿದೆ. ವಾಸ್ತವಿಕವಾಗಿ ಮುಸ್ಲಿಮೇತರ ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಸಿದ ನರಮೇಧಗಳನ್ನು ಒಟ್ಟುಗೂಡಿಸಿದರೆ ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದು ಏನೇನೂ ಇಲ್ಲ ಎಂದು ತಿಳಿಯಬಹುದಾಗಿದೆ. ಆದರೆ ಇತ್ತೀಚೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಮೇತರರ ಹೆಸರುಗಳು ಬಹಿರಂಗಗೊಳ್ಳ ತೊಡಗಿದಾಗ ಅದೇ ಮಾಧ್ಯಮಗಳು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಹೊಸ ಘೋಷಣೆಯನ್ನು ಸೃಷ್ಟಿಸಿದ್ದಾರೆ!
ಪ್ರಭಾಕರನ್, ಹಿಟ್ಲರ್, ಮುಸ್ಸಲೋನಿ, ಜಾರ್ಜ್ ಬುಶ್ ಮುಂತಾದ ಜಗದ್ವಿಖ್ಯಾತ ಭಯೋತ್ಪಾದಕರಾರೂ ಮುಸ್ಲಿಮರಲ್ಲ. ಹಾಗಾದರೆ ಇವರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸಿದ್ದಾದರೂ ಏನು? ಅವರ ಧರ್ಮಗ್ರಂಥಗಳೇ? ಇವರನ್ನೇಕೆ ಧರ್ಮದ ಆಧಾರದಲ್ಲಿ ಭಯೋತ್ಪಾದಕರೆಂದು ಕರೆಯಲಾಗುವುದಿಲ್ಲ?
ಇನ್ನು ಒಂದು ಧರ್ಮದ ಗ್ರಂಥದಲ್ಲಿ ಯುದ್ಧದ ಆಜ್ಞೆಗಳು ಇವೆ ಎಂಬ ಕಾರಣಕ್ಕಾಗಿ ಒಂದು ಧರ್ಮವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುವುದಾದರೆ ಹಿಂದೂ ಗ್ರಂಥಗಳಲ್ಲಿರುವ ಈ ಕೆಳಗಿನ ಯುದ್ಧಾಜ್ಞೆಗಳು ಹಿಂದೂಧರ್ಮವು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆಂದು ಹೇಳಬಹುದೇ?
ಮಹಾಭಾರತ ಯುದ್ಧದ ಸಂದರ್ಭದಲ್ಲಿ ತನ್ನ ದಾಯಾದಿಗಳ ವಿರುದ್ಧ ಹೋರಾಡಲು ಅರ್ಜುನನು ಹಿಂಜರಿದಾಗ ಅವನಿಗೆ ಶ್ರೀಕೃಷ್ಣನು ನೀಡುವ ಆದೇಶವನ್ನು ಭಗವದ್ಗೀತೆ ಯಲ್ಲಿ (2/37) ಈ ರೀತಿ ಉದ್ಧರಿಸಲಾಗಿದೆ:
हतॊ वा प्राप्स्यसि स्वर्गं
जित्वा वा भॊक्ष्यसॆ महीम् ।
तस्मादुत्तिष्ठ कौन्तॆय
युद्धाय कृतनिश्चयः ॥
सुखदुःखॆ समॆ कृत्वा
लाभालाभौ जयजयौ ।
ततॊ युद्धाय युज्यस्व
नैवं पापमवाप्स्यसि ॥ (ಭಗವದ್ಗೀತೆ ಅಧ್ಯಾಯ 2 ಶ್ಲೋಕ 37-38)
ಒಂದೋ ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಭೋಗಿಸುವೆ ಈ ಕಾರಣದಿಂದ ಹೇ ಅರ್ಜುನನೇ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ ದುಃಖಗಳನ್ನು ಸಮಾನವಾಗಿ ತಿಳಿದುಕೊಂಡು, ಅನಂತರ ಯುದ್ಧಕ್ಕಾಗಿ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.
ಜಯದಯಾಲ ಗೋಯಂದಕಾರವರು ತಮ್ಮ ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ (ಪುಟ 68) ಈ ಮೇಲಿನ ವಚನವನ್ನು ಹೀಗೆ ವಿವರಿಸಿದ್ದಾರೆ:
ಆರನೇ ಶ್ಲೋಕದಲ್ಲಿ ಅರ್ಜುನನು – ನನಗಾಗಿ ಯುದ್ಧ ಮಾಡುವುದು ಅಥವಾ ಮಾಡದಿರುವುದು ಯಾವುದು ಶ್ರೇಷ್ಠವಾಗಿದೆ ಹಾಗೂ ಯುದ್ಧದಲ್ಲಿ ವಿಜಯವು ನಮಗಾಗುವುದೋ ಅಥವಾ ನಮ್ಮ ಶತ್ರುಗಳಿಗೋ? ಇದರ ನಿರ್ಣಯವನ್ನು ನಾನು ಮಾಡಲಾರೆ; ಎಂಬ ಮಾತನ್ನು ಹೇಳಿದ್ದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಯುದ್ಧ ಮಾಡುತ್ತಾ ಮಾಡುತ್ತಾ ಸಾಯುವುದರಲ್ಲಿ ಅಥವಾ ವಿಜಯವನ್ನು ಪಡೆಯುವುದರಲ್ಲಿ ಈ ಎರಡರಲ್ಲೂ ಲಾಭವನ್ನು ತೋರಿಸಿಕೊಟ್ಟು ಅರ್ಜುನನಿಗೆ ಯುದ್ಧದ ಶ್ರೇಷ್ಠತೆಯನ್ನು ಭಗವಂತನು ಸಿದ್ಧಪಡಿಸುತ್ತಾನೆ. ಒಂದು ವೇಳೆ ಯುದ್ಧದಲ್ಲಿ ನಿನ್ನ ಶತ್ರುಗಳಿಗೆ ಜಯವುಂಟಾಗಿ ನೀನು ಕೊಲ್ಲಲ್ಪಟ್ಟರೂ ಸಹ ಒಳ್ಳೆಯ ಮಾತೇ ಆಗುತ್ತದೆ; ಏಕೆಂದರೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದರಿಂದ ನಿನಗೆ ಸ್ವರ್ಗ ದೊರೆಯುವುದು ಮತ್ತು ಒಂದು ವೇಳೆ ವಿಜಯಿಯಾದರೆ ಭೂಮಂಡಲದ ರಾಜ್ಯ ಸುಖವನ್ನು ಅನುಭವಿಸುವೆ; ಆದುದರಿಂದ ಎರಡೂ ದೃಷ್ಟಿಗಳಿಂದ ನಿನಗಾದರೋ ಯುದ್ಧ ಮಾಡುವುದೇ ಎಲ್ಲ ಪ್ರಕಾರದಿಂದಲೂ ಶ್ರೇಷ್ಠವಾಗಿದೆ. ಅದಕ್ಕಾಗಿ ನೀನು ಯುದ್ಧಕ್ಕೆ ಕಟಿಬದ್ಧನಾಗಿ ಸಿದ್ಧನಾಗು ಎಂಬುದೇ ಅಭಿಪ್ರಾಯವಾಗಿದೆ. (ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ ಪುಟ 68)
ಇಲ್ಲಿರುವ ಗಮನಾರ್ಹವಾದ ಸಂಗತಿಯೇನೆಂದರೆ ಶ್ರೀಕೃಷ್ಣನು ಅರ್ಜುನನೊಂದಿಗೆ ಹೋರಾಡಲು ಹುರಿದುಂಬಿಸುವುದು ಅವನ ಸ್ವಂತ ದಾಯಾದಿಗಳೊಂದಿಗಾಗಿದೆ. ಅರ್ಥಾತ್ ಅವನ ಪಿತೃಸಹೋದರ ಪುತ್ರರೊಂದಿಗಾಗಿದೆ. ಒಂದೋ ನೀನು ಅವರನ್ನು ನಾಶ ಮಾಡಬೇಕು ಅಥವಾ ನೀನು ನಾಶವಾಗಬೇಕು. ಆದರೆ ಯುದ್ಧದಿಂದ ನೀನು ಹಿಂಜರಿಯಬಾರದು. ಎರಡರಲ್ಲಿಯೂ ನಿನಗೇ ಒಳಿತೇ ಇದೆ ಎಂದು ಬೋಧಿಸುತ್ತಾನೆ.
ಈ ವಚನದ ಆಧಾರದಲ್ಲಿ ಭಗವದ್ಗೀತೆಯು ಸ್ವಂತ ದಾಯಾದಿಗಳನ್ನೇ ಕೊಲ್ಲಲು ಆದೇಶಿಸುತ್ತದೆ ಎಂದು ಹೇಳಲಾದೀತೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಈ ವಚನದ ಹಿನ್ನೆಲೆ ಯುದ್ಧಭೂಮಿಯಾಗಿದೆ.
ಋಗ್ವೇದದ ಒಂದನೇ ಮಂಡಲ, 132ನೇ ಸೂಕ್ತದ 2ರಿಂದ 6ರವರೆಗಿನ ಋಕ್ಕುಗಳು ಯುದ್ಧ ಮಾಡುವುದನ್ನು ಹುರಿದುಂಬಿಸುತ್ತವೆ. ಉದಾಹರಣೆಗೆ ಅದರ ನಾಲ್ಕನೇ ಋಕ್ಕಿನ ಒಂದು ಭಾಗವನ್ನು ನೋಡಿರಿ:
ಓ ಇಂದ್ರದೇವ, ಯಜ್ಞಾದಿ ಶ್ರೇಷ್ಠ ಕರ್ಮಗಳನ್ನು ಮಾಡುವವರ ಹಿತಕ್ಕೋಸ್ಕರ ನೀನು ಯಜ್ಞವಿರುದ್ಧರನ್ನು ಮತ್ತು ಕ್ರೋಧಯುಕ್ತ ಪಾಪಿಗಳನ್ನು ನಾಶಗೊಳಿಸು.
ಋಗ್ವೇದದ ಈ ವಚನವು ಯಜ್ಞವಿರೋಧಿಗಳನ್ನು ಸಾರ್ವತ್ರಿಕವಾಗಿ ಕೊಲ್ಲಲು ಆದೇಶಿಸುತ್ತದೆ ಎಂದು ಇದರ ಆಧಾರದಲ್ಲಿ ಹೇಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ!
ಇದೇ ರೀತಿ ಕುರ್‌ಆನಿನಲ್ಲಿರುವ ವಚನಗಳು ಕೂಡಾ ಯುದ್ಧದ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ವಚನಗಳಾಗಿವೆ. ಮುಸ್ಲಿಮೇತರರನ್ನು ಸದಾ ಕೊಲ್ಲುತ್ತಿರಬೇಕು ಎಂಬ ಆಶಯವನ್ನು ಈ ವಚನಗಳು ಸಾರುವುದಿಲ್ಲ.
ಇನ್ನು ಮುಸ್ಲಿಮ್ ಭಯೋತ್ಪಾದಕರು ಕುರ್‌ಆನಿನ ಆಧಾರದಿಂದಲೇ ಮುಸ್ಲಿಮೇತರರನ್ನು ಕೊಲ್ಲುತ್ತಿರುವರು ಎಂದು ವಾದಿಸುತ್ತಿರುವವರು ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಬಾಂಬ್ ಎಸೆದು ಕೊಲ್ಲಲು ಅದೇ ಭಯೋತ್ಪಾದಕರಿಗೆ ಯಾವ ಸೂಕ್ತಿಗಳು ಪ್ರೇರಣೆ ನೀಡಿದವು ಎಂಬುದನ್ನು ಕೂಡಾ ಸ್ಪಷ್ಟಪಡಿಸಿಕೊಡಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ ಕುರ್‌ಆನ್‌ನಲ್ಲಿ ವಧಾಸೂಕ್ತಿಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಅವತೀರ್ಣ ಹಿನ್ನೆಲೆಗಳನ್ನು ಅರಿತುಕೊಂಡಿರುವುದು ಕಡ್ಡಾಯವಾಗಿದೆ. ಯಾಕೆಂದರೆ ಕುರ್‌ಆನ್‌ನ ಎಲ್ಲ ವಚನಗಳೂ ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ ಎಂದು ಜಗತ್ತಿನ ಒಬ್ಬನೇ ಒಬ್ಬ ಕುರ್‌ಆನ್ ವ್ಯಾಖ್ಯಾನಕಾರನು ಹೇಳಿಲ್ಲ. ಇನ್ನು ಮುಸ್ಲಿಮರ ಪೈಕಿ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಸೂಕ್ತಿಗಳನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಕುರ್‌ಆನ್ ಹೊಣೆಯಾಗಲಾರದು. ಇಸ್ಲಾಮಿನ ಹೆಸರಿನಲ್ಲಿ ಇಂದು ಕೆಲವರು ನಡೆಸುತ್ತಿರುವ ಭಯೋತ್ಪಾದನೆಯನ್ನು ಮುಸ್ಲಿಮ್ ವಿದ್ವಾಂಸರೆಲ್ಲರೂ ಒಕ್ಕೊರಳಿನಿಂದ ಖಂಡಿಸಿದ್ದಾರೆ.


ಕೃಪೆ: ಸತ್ಯ ಸಾರಥಿ 2011

ಜಿಹಾದ್ ಎಂದರೆ ಧರ್ಮಯುದ್ಧವೇ?


ಜಿಹಾದ್ ಎಂಬ ಪದದ ನೇರವಾದ ಅರ್ಥವು (direct meaning) ಧರ್ಮಯುದ್ಧವಾಗಿದೆಯೆಂದು ಬಹುತೇಕ ಮಂದಿಯೂ ತಪ್ಪುಕಲ್ಪನೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಿರುವ ಮುಖ್ಯ ಕಾರಣವು ಪಾಶ್ಚಾತ್ಯರ ಅಂಧಾನುಕರಣೆಯಾಗಿದೆ.

ಉದಾಹರಣೆಗೆ ‘Oxford University Press’ ಪ್ರಕಟಿಸಿದ ‘Oxford Advanced Learner’s Dictionary’ಯಲ್ಲಿ ಜಿಹಾದ್ (Jihad) ಎಂಬ ಪದಕ್ಕೆ ನೀಡಿದ ಅರ್ಥವನ್ನು ಈ ರೀತಿ ಕಾಣಬಹುದು:

“holy war fought by Muslims against those who reject Islam”

ಇಸ್ಲಾಮನ್ನು ತಿರಸ್ಕರಿಸುವವರ ವಿರುದ್ಧ ಮುಸ್ಲಿಮರು ಹೋರಾಡುವ ಪವಿತ್ರ ಯುದ್ಧ. (ಪುಟ 673)

ಪಾಶ್ಚಾತ್ಯರ ವಿಚಾರಧಾರೆಗಳನ್ನು ಹಾಗೆಯೇ ಭಟ್ಟಿಯಿಳಿಸಿಕೊಳ್ಳುವ ನಮ್ಮವರು ಜಿಹಾದ್‌ನ ವಿಷಯದಲ್ಲಿ ಕೂಡ ಅವರನ್ನು ಅಂಧವಾಗಿ ಅನುಕರಿಸಿದ್ದಾರೆ. ಗದಗದ ಸಂಕೇಶ್ವರ ಪ್ರಿಂಟರ‍್ಸ್ ಪ್ರಕಟಿಸಿದ ಇಂಗ್ಲಿಷ್-ಕನ್ನಡ ಸ್ಟ್ಯಾಂಡರ್ಡ್ ಡಿಕ್ಷನರಿಯಲ್ಲಿ ಇದೇ ರೀತಿಯ ಅರ್ಥ ನೀಡಿರುವುದನ್ನು ಕಾಣಬಹುದು:

ಕಾಫಿರರ ವಿರುದ್ಧ ಮುಸಲ್ಮಾನರ ಧರ್ಮಯುದ್ಧ; ಒಂದು ಮತಸಿದ್ಧಾಂತದ ಪರ ಅಥವಾ ವಿರುದ್ಧ ಹೂಡುವ ಧರ್ಮಯುದ್ಧ. (ಪುಟ 445)

ವಾಸ್ತವಿಕವಾಗಿ ಜಗತ್ತಿನ ಮುಂದೆ ಇಸ್ಲಾಮನ್ನು ಕರುಣೆಯಿಲ್ಲದ, ಬರ್ಬರ, ಕಿರಾತಕ ಧರ್ಮವೆಂದು ಬಿಂಬಿಸಲು ಹೆಣಗಾಡುವ ಪಾಶ್ಚಾತ್ಯರ ಒಂದು ತಂತ್ರ ಮಾತ್ರವಾಗಿದೆ ಇದು.

ಮಧ್ಯಯುಗದ ಕಾಲದಲ್ಲಿ ಮುಸ್ಲಿಮರ ಮತ್ತು ಯಹೂದಿಗಳ ವಿರುದ್ಧ ದಂಡೆತ್ತಿ ಬಂದ ಕ್ರಿಶ್ಚಿಯನ್ ಸಾಮ್ರಾಟರು ತಮ್ಮ ಆ ಹೋರಾಟವನ್ನು ಅಂದು ಧರ್ಮಯುದ್ಧವೆಂದು ಕರೆದಿದ್ದರು. ಸಲಾಹುದ್ದೀನ್ ಅಯ್ಯೂಬಿಯ ನಾಯಕತ್ವದಲ್ಲಿ ಮುಸ್ಲಿಮ್ ಸೇನೆಯು ಅವರನ್ನು ಹಿಮ್ಮೆಟ್ಟಿಸುವವರೆಗೆ ವರ್ಷಗಳ ಕಾಲ ಅವರು ಲಕ್ಷಾಂತರ ಜನರ ಮಾರಣಹೋಮ ನಡೆಸಿದರು. ಇದು ತದನಂತರ ‘Christian Crusades’ ಅಥವಾ ಶಿಲುಬೆಯುದ್ಧಗಳು ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು.

ಆದರೆ ಧರ್ಮದ ಹೆಸರಿನಲ್ಲಿ ತಮ್ಮ ಪೂರ್ವಿಕರು ನಡೆಸಿದ ಬರ್ಬರ ಹತ್ಯಾ ಕಾಂಡವನ್ನು ತಂತ್ರಪೂರ್ವಕವಾಗಿ ಮರೆಮಾಚುತ್ತಿರುವ ಪಾಶ್ಚಾತ್ಯರು ‘Crusade’ ಎಂಬ ಪದಕ್ಕೆ ಅದೇ ಡಿಕ್ಷನರಿಯಲ್ಲಿ ನೀಡಿದ ಅರ್ಥವನ್ನು ಗಮನಿಸಿ:

“anyone of the military expeditions by the European Christian countries to recover the Holy Land from the Muslims in the Middle Ages”

ಮಧ್ಯಯುಗದ ಕಾಲದಲ್ಲಿ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿ ಐರೋಪ್ಯ ಕ್ರೈಸ್ತ ರಾಷ್ಟ್ರಗಳಿಂದ ನಡೆಸಲ್ಪಟ್ಟ ಯಾವುದಾದರೊಂದು ಸೈನಿಕ ದಂಡೆಯಾತ್ರೆ. (ಪುಟ 288)

ಹೇಗಿದೆ ನೋಡಿ!! ನಿಷ್ಪಕ್ಷವಾಗಿ ಚಿಂತಿಸುವ ಓರ್ವ ವ್ಯಕ್ತಿಗೆ ಪಾಶ್ಚಾತ್ಯರ ಈ ಕುಟಿಲತೆಯು ಸುಲಭವಾಗಿ ಮನದಟ್ಟಾಗಬಹುದು. ಜಿಹಾದ್ ಮತ್ತು ಕ್ರುಸೇಡ್ ಗಳ ಮಧ್ಯೆ ಪಾಶ್ಚಾತ್ಯರು ತೋರಿಸುವ ಸ್ಪಷ್ಟವಾದ ಅಂತರ ಮತ್ತು ಪದಕಸರತ್ತುಗಳಿಂದ ತಮ್ಮ ಧರ್ಮವನ್ನು ಅವರು ಸಂರಕ್ಷಿಸುವ ಶೈಲಿಯು ಅದ್ವಿತೀಯವಾಗಿದೆ. ಜಿಹಾದನ್ನು ಅತಿ ಕ್ರೂರವಾಗಿ ವರ್ಣಿಸುವ ಅವರು ಕ್ರುಸೇಡನ್ನು ಅದು ಏನೂ ಅಲ್ಲವೆಂಬಂತೆ ಚಿತ್ರಿಸಿದ್ದಾರೆ!

ವಾಸ್ತವಿಕವಾಗಿ ಪಾಶ್ಚಾತ್ಯರು ಹೇಳುವಂತಹ ಅರ್ಥವಾಗಿದೆಯೇ ಜಿಹಾದ್ ಎಂಬ ಪದಕ್ಕಿರುವುದು? ಅಲ್ಲವೆಂದಾದರೆ ಜಿಹಾದ್ ಎಂಬ ಪದದ ನಿಜವಾದ ಅರ್ಥೆವೇನು?

ಜಿಹಾದ್ ಎಂಬುದು ಜಾಹದ ಎಂಬ ಕ್ರಿಯಾಪದದ ಕ್ರಿಯಾಧಾತುವಾಗಿದೆ. ಕ್ರೈಸ್ತರೇ ಸ್ವತಃ ಬರೆದು ಪ್ರಕಟಿಸಿದ ಅಲ್‌ಮುನ್ಜಿದ್ ಎಂಬ ಅರಬಿ ಡಿಕ್ಷನರಿಯಲ್ಲಿ ಇದಕ್ಕೆ ನೀಡಿದ ಅರ್ಥವು ಹೀಗಿದೆ:

جَاهَدَ مُجَاهَدَةً وَجِهَادًا : بَذَلَ وُسْعَهُ . وَمِنَ الْقُرْآنِ :  وَجَاهِدُوا فِي اللهِ حَقَّ جِهَادِهِ  || وَ – الْعَدُوَّ : قَاتَلَهُ مُحَامَاةً عَنِ الدِّينِ . وَالْأَصْلُ بَذَلَ كُلٌّ مِنْهُمَا جُهْدَهُ فِي دَفْعِ صَاحِبِهِ

ಜಾಹದ: ಇದರ ಕ್ರಿಯಾಧಾತುಗಳಾಗಿವೆ ಮುಜಾಹದತ್ ಮತ್ತು ಜಿಹಾದ್. ಇದರ ಅರ್ಥ: ಒರ್ವನು ತನ್ನ ಶ್ರಮವನ್ನು ವ್ಯಯಿಸಿದನು ಎಂದಾಗಿದೆ. ಕುರ್‌ಆನ್‌ನಲ್ಲಿ ಹೀಗಿದೆ: ಅಲ್ಲಾಹನಿಗಾಗಿ ಜಿಹಾದ್ ಮಾಡಬೇಕಾದ ರೀತಿಯಲ್ಲಿ ಜಿಹಾದ್ ಮಾಡಿರಿ (22/77). ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ: ಧರ್ಮವನ್ನು ಸಂರಕ್ಷಿಸುವುದಕ್ಕಾಗಿ ಶತ್ರುವಿನ ವಿರುದ್ಧ ಹೋರಾಡಿದನು ಎಂದಾಗಿದೆ. ಇದರ ಮೂಲವು (ಶತ್ರುಗಳ ವಿರುದ್ಧ ಜಿಹಾದ್ ಮಾಡುವುದರ ಮೂಲವು) ಇಬ್ಬರು ವ್ಯಕ್ತಿಗಳು ಪರಸ್ಪರ ರಕ್ಷಣೆಗಾಗಿ ತಮ್ಮ ಶ್ರಮವನ್ನು ವ್ಯಯಿಸಿದರು ಎಂಬುದರಿಂದ ಬಂದುದಾಗಿದೆ. (ಪುಟ 106)

ಅರೇಬಿಕ್-ಇಂಗ್ಲಿಷ್ ಡಿಕ್ಷನರಿಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿರುವ, ಎಂಟು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿರುವ ಬೃಹತ್ ಡಿಕ್ಷನರಿಯಾಗಿರುವ ‘Arabic English Lexicon’ನಲ್ಲಿ ಅದರ ಸಂಪಾದಕರಾದ ಎಡ್ವರ್ಡ್ ವಿಲಿಯಂ ಲೇನ್ (Edward William Lane) ಜಿಹಾದ್ ಎಂಬ ಪದದ ನೈಜ ಅರ್ಥವನ್ನು ವಿವರಿಸುವುದನ್ನು ನೋಡಿರಿ:

 “ جِهَادٌ inf. n. of جَاهَدَ , properly signifies The using, or exerting, one’s utmost power, efforts, endeavours, or ability, in contending with an object of disapprobation; and this is of three kinds, namely, a visible enemy, the devil, and one’s self; all of which are included in the term as used in the Kuran xxii. 77.

You say, جَاهَدَ الْعَدُوَّ inf. n. as above and مُجَاهَدَةً He fought with the enemy or he encountered the enemy, imposing upon himself difficulty or distress or fatigue, or exerting his power or efforts or endeavours or ability, [or the utmost thereof,] to repel him, his enemy doing the like: and hence جَاهَدَ came to be used by the Muslims to signify generally he fought, warred, or waged war, against unbelievers and the like. You say also, جَاهَدَ فِي سَبِيلِ اللهِ , inf. n. جِهَادٌ and مُجَاهَدَةٌ ,  [He fought, &c., in the way of God; i e., in the cause of religion.] ”

ಜಿಹಾದ್ ಎಂಬುದು ಜಾಹದ ಎಂಬುದರ ಕ್ರಿಯಾಧಾತುವಾಗಿದೆ. ಇದರ ಸರಿಯಾದ ಅರ್ಥವು: ಓರ್ವನು ತನ್ನ ಪರಮವಾದ ಬಲವನ್ನು, ಶ್ರಮವನ್ನು, ಪ್ರಯತ್ನವನ್ನು ಮತ್ತು ಸಾಮರ್ಥ್ಯವನ್ನು ಅನಿಷ್ಟಕರವಾದ ವಸ್ತುವಿನ ವಿರುದ್ಧ ಹೋರಾಡುವುದಕ್ಕಾಗಿ ಬಳಸುವುದು ಅಥವಾ ಪ್ರಯೋಗಿಸುವುದು ಎಂದಾಗಿದೆ. ಈ ಅನಿಷ್ಟಕರವಾದ ವಸ್ತು ಮೂರು ವಿಧಗಳಾಗಿವೆ: ಪ್ರತ್ಯಕ್ಷ ಶತ್ರು, ಪಿಶಾಚಿ ಅಥವಾ ಸ್ವಂತ ಶರೀರ. ಕುರ್‌ಆನ್‌ನ 22/77 ವಚನದಲ್ಲಿ ಬಳಸಿರುವಂತೆ ಇವೆಲ್ಲವೂ ಜಿಹಾದ್ ಎಂಬ ಪದದಲ್ಲಿ ಒಳಪಡುತ್ತವೆ.

ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ ಅದರ ಅರ್ಥವು: ಅವನು ತನ್ನ ಶರೀರದ ಮೇಲೆ ಕಷ್ಟ, ಯಾತನೆ ಅಥವಾ ಆಯಾಸವನ್ನು ಹೊರಿಸಿ, ಅಥವಾ ತನ್ನ ಬಲ, ಶ್ರಮ, ಪ್ರಯತ್ನ ಮತ್ತು ಸಾಮರ್ಥ್ಯವನ್ನು [ಅಥವಾ ಅವುಗಳ ಪಾರಮ್ಯವನ್ನು] ಪ್ರಯೋಗಿಸಿ, ತನ್ನ ಶತ್ರು ಕೂಡ ಇದೇ ರೀತಿ ತನ್ನ ವಿರುದ್ಧ ಪ್ರಯೋಗಿಸದಿರಲೆಂದು, ಅವನನ್ನು ಹಿಮ್ಮೆಟ್ಟಿಸುವುದಕ್ಕಾಗಿ ಅವನ ವಿರುದ್ಧ ಹೋರಾಡಿದನು ಎಂದಾಗಿದೆ. ಜಿಹಾದ್ ಎಂಬ ಪದಕ್ಕೆ ಈ ಅರ್ಥವಿರುವುದರಿಂದಾಗಿದೆ ಸಾಮಾನ್ಯವಾಗಿ ಅವನು ಅವಿಶ್ವಾಸಿಗಳ ಮತ್ತು ಅವರಂತಿರುವವರ ವಿರುದ್ಧ ಯುದ್ಧ ಮಾಡಿದನು, ಹೋರಾಡಿದನು ಎಂಬುದನ್ನು ಸೂಚಿಸಲು ಮುಸ್ಲಿಮರು ಈ ಪದವನ್ನು ಬಳಸುತ್ತಿರುವುದು. ಜಾಹದ ಫೀ ಸಬೀಲಿಲ್ಲಾಹ್ ಎಂದರೆ ಅದರ ಅರ್ಥವು: ಅವನು ದೇವನ ಮಾರ್ಗದಲ್ಲಿ ಅರ್ಥಾತ್ ಧರ್ಮದ ನಿಮಿತ್ತ ಹೋರಾಡಿದನು ಎಂದಾಗಿದೆ. (2/473)

ಇಸ್ಲಾಮನ್ನು ತಿರಸ್ಕರಿಸುವವರ (ಮುಸ್ಲಿಮೇತರರ) ವಿರುದ್ಧ ಮಾಡುವ ಪವಿತ್ರ ಯುದ್ಧವಾಗಿದೆ ಜಿಹಾದ್ ಎಂದು ಬರೆದ ಪಾಶ್ಚಾತ್ಯರು ಮತ್ತು ಜಿಹಾದ್ ಎಂಬ ಪದಕ್ಕಿರುವ ನೈಜವಾದ ಅರ್ಥವನ್ನು ಬರೆದ ಅರಬ್ ಕ್ರೈಸ್ತರ ಮಧ್ಯೆಯಿರುವ ಅಗಾಧ ವ್ಯತ್ಯಾಸವನ್ನು ಮತ್ತು ಪರಿಜ್ಞಾನವನ್ನು ಇದರಿಂದ ಕಂಡುಕೊಳ್ಳಬಹುದಾಗಿದೆ.

ಆದ್ದರಿಂದ ಅರಬಿ ಭಾಷೆಯಲ್ಲಿ ಜಿಹಾದ್ ಎಂಬುದರ ಅರ್ಥವು ಪರಿಶ್ರಮಿಸುವುದು, ಕಷ್ಟಪಟ್ಟು ಮಾಡುವುದು, ಕಠಿಣವಾಗಿ ಪ್ರಯತ್ನಿಸುವುದು ಎಂದಾಗಿದೆ. ಅಧಿಕ ಶ್ರಮವಿರುವ ಕೆಲಸವನ್ನು ಅರಬಿಯಲ್ಲಿ ಜುಹ್ದ್ ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ hardwork ಎನ್ನಲಾಗುವಂತೆ. ಅರಬಿಯಲ್ಲಿ ಜಿಹಾದ್ ಎಂಬ ಪದಕ್ಕೆ ಧರ್ಮಯುದ್ಧ ಅಥವಾ ಪವಿತ್ರಯುದ್ಧ (holy war) ಎಂಬ ಅರ್ಥವು ಇಲ್ಲವೇ ಇಲ್ಲ. ಇದು ತಮ್ಮ ಕ್ರುಸೇಡನ್ನು ನ್ಯಾಯೀಕರಿಸುವುದಕ್ಕಾಗಿ ಪಾಶ್ಚಾತ್ಯರು ಆವಿಷ್ಕರಿಸಿದ ನವೀನ ಅರ್ಥವಾಗಿದೆ. ಪವಿತ್ರ ಯುದ್ಧವನ್ನು ಅರಬಿಯಲ್ಲಿ ಹರ್ಬುನ್ ಮುಕದ್ದಸತುನ್ ಎನ್ನಲಾಗುತ್ತದೆ.

ಎಲಿಯಾಸ್ ಅಂತೋನಿ ಮತ್ತು ಎಡ್ವರ್ಡ್ ಎಲಿಯಾಸ್ ಬರೆದ ‘The School Dictionary’ ಎಂಬ ಇಂಗ್ಲಿಷ್-ಅರೇಬಿಕ್ ಡಿಕ್ಷನರಿಯಲ್ಲಿ crusade ಎಂಬ ಪದಕ್ಕೆ ನೀಡಿದ ಅರ್ಥವನ್ನು ಗಮನಿಸಿ:

حَرْبٌ صَلِيبِيَّةٌ

ಶಿಲುಬೆಯುದ್ಧ (ಪುಟ 70):
ಶಿಲುಬೆಯನ್ನು ಮುಂದಿಟ್ಟುಕೊಂಡು ಯುದ್ಧಮಾಡಿದ ಮಧ್ಯಯುಗದ ಕ್ರೈಸ್ತರ ಕ್ರುಸೇಡ್ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿರುವ ಹೋರಾಟವೆಂದು ಸಬೂಬು ನೀಡುವ ಪಾಶ್ಚಾತ್ಯರು ಜಿಹಾದ್ ಎಂಬ ಪದಕ್ಕೆ ಅದರ ನೈಜವಾದ ಅರ್ಥವನ್ನು ಯಾಕೆ ಹೇಳುವುದಿಲ್ಲ? ನಾವು ನಿಷ್ಪಕ್ಷವಾಗಿ ಚಿಂತಿಸಬೇಕಾಗಿದೆ.

ವಾಸ್ತವಿಕವಾಗಿ ಇಸ್ಲಾಮೀ ಪ್ರಮಾಣಗಳಲ್ಲಿ ಜಿಹಾದ್ ಎಂಬ ಪದವನ್ನು ಧಾರಾಳವಾಗಿ ಬಳಸಲಾಗಿದೆ. ಪರಿಶ್ರಮಿಸುವುದು, ಕಷ್ಟಪಡುವುದು, ಸ್ವೇಚ್ಛೆಯನ್ನು ಮೆಟ್ಟಿನಿಲ್ಲುವುದು, ಆಪತ್ಕರ ಘಟ್ಟಗಳಲ್ಲಿ ಸತ್ಯವನ್ನು ನುಡಿಯುವುದು, ಮಾತಾಪಿತರ ಸೇವೆಗೈಯುವುದು ಮುಂತಾದ ಅನೇಕ ಕಾರ್ಯಗಳನ್ನು ಇಸ್ಲಾಮ್ ಜಿಹಾದ್ ಎಂದೇ ಬಣ್ಣಿಸುತ್ತದೆ. ಅದೇ ರೀತಿ ಧರ್ಮ ಸಂರಕ್ಷಣೆಗಾಗಿ ಲೇಖನಿಯ ಮೂಲಕ, ನಾಲಗೆಯ ಮೂಲಕ ನಡೆಸುವ ಹೋರಾಟವನ್ನು ಮತ್ತು ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಕೂಡ ಜಿಹಾದ್ ಎಂದೇ ಕರೆಯುತ್ತದೆ. ನಾವೀಗಾಗಲೇ ಕಂಡುಕೊಂಡಂತೆ ಸಶಸ್ತ್ರ ಹೋರಾಟವೆಂಬುದು ಜಿಹಾದ್ ಎಂಬ ಪದಕ್ಕಿರುವ ಅನೇಕ ಅರ್ಥಗಳಲ್ಲಿ ಒಂದು ಮಾತ್ರವಾಗಿದೆಯೇ ಹೊರತು ಅದರ ನೇರವಾದ ಅರ್ಥ (direct meaning) ಅಲ್ಲ.

ಪ್ರವಾದಿ(ಸ)ರವರು ಹೇಳಿದರು:
ಓರ್ವ ವ್ಯಕ್ತಿ ತನ್ನ ಶರೀರ ಮತ್ತು ಸ್ವೇಚ್ಛೆಯ ವಿರುದ್ಧ ಹೋರಾಡುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1099)

ಪ್ರವಾದಿ(ಸ)ರವರು ಹೇಳಿದರು:
ಅಕ್ರಮಿಯಾದ ರಾಜನ ಮುಂದೆ ಸತ್ಯ ಮಾತನ್ನು ಹೇಳುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1100)

ಅದೇ ರೀತಿ ಪ್ರವಾದಿ(ಸ)ರವರು ಹೇಳಿದರು:
ಸ್ವೀಕಾರ‍್ಯಯೋಗ್ಯವಾದ ರೀತಿಯಲ್ಲಿ ಹಜ್ ನಿರ್ವಹಿಸುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಬುಖಾರಿ ಹದೀಸ್ ನಂ. 1448)

ಇವು ಕೇವಲ ಕೆಲವು ಉದಾಹರಣೆಗಳು ಮಾತ್ರವಾಗಿವೆ. ಈ ಮೇಲಿನ ಹದೀಸ್ ಗಳಲ್ಲಿ ಜಿಹಾದ್ ಎಂದರೆ ಏನೆಂದು ಪ್ರವಾದಿ(ಸ)ರವರು ಸ್ವತಃ ವಿವರಿಸಿದ್ದಾರೆ. ಅರ್ಥಾತ್ ಇಲ್ಲಿ ಉದಾಹರಣೆಯಾಗಿ ನೀಡಲಾದ ಮೂರು ರೀತಿಯ ಜಿಹಾದ್‌ಗಳನ್ನು ಮಾಡಬೇಕಾದರೆ ಓರ್ವನು ತನ್ನ ಪರಮವಾದ ಬಲವನ್ನು, ಧೈರ್ಯವನ್ನು ಮತ್ತು ಪರಿಶ್ರಮವನ್ನು ಬಳಸಿ ತನ್ನ ಶರೀರದ ವಿರುದ್ಧ, ತನ್ನ ಶತ್ರುವಿನ ವಿರುದ್ಧ ಮತ್ತು ಪಿಶಾಚಿಯ ದುರ್ಬೋಧನೆಗಳ ವಿರುದ್ಧ ಹೋರಾಡಬೇಕಾಗಿದೆ. ಇದರ ಹೊರತು ಮುಸ್ಲಿಮೇತರರನ್ನು ಕೊಲ್ಲುವುದಾಗಿದೆ ಜಿಹಾದ್ ಎಂದು ಅಲ್ಲಾಹನಾಗಲಿ ಪ್ರವಾದಿ(ಸ)ರವರಾಗಲಿ ಎಲ್ಲೂ ಹೇಳಿಲ್ಲ.

ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಇಸ್ಲಾಮ್ ಜಿಹಾದ್ ಎಂದು ಕರೆದಿದ್ದರೂ ಕೂಡ ಅದು ಮಾತ್ರವಾಗಿದೆ ಜಿಹಾದ್ ಎಂದು ಹೇಳಿಲ್ಲ. ಉದಾಹರಣೆಗೆ ಒಮ್ಮೆ ಪ್ರವಾದಿ(ಸ)ರವರು ಯುದ್ಧಕ್ಕಾಗಿ ಸೈನ್ಯ ಜಮಾವಣೆ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ಬಂದು ನಾನು ತಮ್ಮೊಂದಿಗೆ ಜಿಹಾದ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ ಎನ್ನುತ್ತಾರೆ. ಆಗ ಪ್ರವಾದಿ(ಸ)ರವರು ಆ ವ್ಯಕ್ತಿಯೊಂದಿಗೆ ನಿನ್ನ ಮಾತಾಪಿತರು ಬದುಕಿದ್ದಾರೆಯೇ ಎಂದು ಕೇಳುತ್ತಾರೆ. ಆ ವ್ಯಕ್ತಿ ಹೌದೆನ್ನುತ್ತಾರೆ. ಆಗ ಪ್ರವಾದಿ(ಸ)ರವರು ಹೇಳುತ್ತಾರೆ:

ಹಾಗಾದರೆ ನಿನ್ನ ಮಾತಾಪಿತರಲ್ಲಿ ನೀನು ಜಿಹಾದ್ ಮಾಡು. (ಸಹೀಹುಲ್ ಬುಖಾರಿ ಹದೀಸ್ ನಂ. 2842)

ಅರ್ಥಾತ್ ನೀನು ಪರಮವಾಗಿ ಪರಿಶ್ರಮಿಸಿ ನಿನ್ನ ವೃದ್ಧ ಮಾತಾಪಿತರ ಸೇವೆಗೈಯುವುತ್ತಾ ಬದುಕಿರುವುದಾಗಿದೆ ಸಶಸ್ತ್ರ ಹೋರಾಟ ಮಾಡಿ ಮಡಿಯುವುದಕ್ಕಿಂತಲೂ ನಿನಗಿರುವ ಶ್ರೇಷ್ಠವಾದ ಜಿಹಾದ್ ಎನ್ನುತ್ತಾ ಪ್ರವಾದಿ(ಸ)ರವರು ಆ ವ್ಯಕ್ತಿಯನ್ನು ಹಿಂದಕ್ಕೆ ಕಳುಹಿಸುತ್ತಾರೆ.

ಆದ್ದರಿಂದ ಸಂಕ್ಷಿಪ್ತವಾಗಿ ಹೇಳುವುದಾದರೆ ಓರ್ವ ವ್ಯಕ್ತಿಯು ತನ್ನ ಪರಮವಾದ ಪರಿಶ್ರಮವನ್ನು ಬಳಸಿ ಅಲ್ಲಾಹನ ತೃಪ್ತಿಯನ್ನು ಆಗ್ರಹಿಸುತ್ತಾ ಮಾಡುವ ಪ್ರತಿಯೊಂದು ಸತ್ಕರ್ಮವನ್ನೂ ಇಸ್ಲಾಮ್ ಜಿಹಾದ್ ಎಂದೇ ಕರೆದಿದೆ. ಕುರ್‌ಆನ್ ಹೇಳುತ್ತದೆ:

ನಮಗೋಸ್ಕರ (ಅಲ್ಲಾಹನಿಗೋಸ್ಕರ) ಜಿಹಾದ್ ಮಾಡುವವರನ್ನು ನಾವು ನಮ್ಮ ಮಾರ್ಗಗಳೆಡೆಗೆ ಖಂಡಿತವಾಗಿಯೂ ಮುನ್ನಡೆಸುವೆವು. ಖಂಡಿತವಾಗಿಯೂ ಅಲ್ಲಾಹು ಸತ್ಕರ್ಮ ಗೈಯುವವರ ಜೊತೆಗಿದ್ದಾನೆ. (29/69)

ಇಲ್ಲಿ ಅಲ್ಲಾಹನಿಗೋಸ್ಕರ ಜಿಹಾದ್ ಮಾಡುವುದು ಎಂದರೆ ಮುಸ್ಲಿಮೇತರರನ್ನು ಕೊಲ್ಲುವುದಾಗಲಿ, ಅವರ ವಿರುದ್ಧ ಧರ್ಮಯುದ್ಧವನ್ನು ಸಾರುವುದಾಗಲಿ ಅಲ್ಲ. ಬದಲಾಗಿ ಅಲ್ಲಾಹನ ತೃಪ್ತಿಯನ್ನು ಬಯಸುತ್ತಾ ಪರಮವಾಗಿ ಪರಿಶ್ರಮಿಸಿ ಸತ್ಕರ್ಮಗಳನ್ನು ಮಾಡುವುದಾಗಿದೆಯೆಂದು ಜಿಹಾದ್‌ಗೆ ಧರ್ಮಯುದ್ಧ ಅಥವಾ ಪವಿತ್ರಯುದ್ಧವೆಂದು ಅರ್ಥ ನೀಡುವವರು ಅರಿತುಕೊಳ್ಳಬೇಕು.

ಮುಖ ಎಂದು ಹೇಳುವಾಗ ಯಾವ ರೀತಿ ಅದು ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗು, ಬಾಯಿ ಇತ್ಯಾದಿಗಳನ್ನು ಹೊಂದಿರುತ್ತದೆಯೋ ಮತ್ತು ಮುಖ ಎಂದರೆ ಅದು ಕೇವಲ ಮೂಗು ಎಂದು ಯಾವ ರೀತಿ ಅರ್ಥ ನೀಡಲು ಸಾಧ್ಯವಿಲ್ಲವೋ ಅದೇ ರೀತಿ ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವು ಜಿಹಾದ್‌ನ ಒಂದು ಅಂಗವಾಗಿದ್ದರೂ ಕೂಡ ಜಿಹಾದ್ ಎಂದರೆ ಕೇವಲ ಸಶಸ್ತ್ರ ಹೋರಾಟವೆಂದು ಅರ್ಥ ನೀಡಲು ಸಾಧ್ಯವಿಲ್ಲ.

ಕೃಪೆ: ಸತ್ಯ ಸಾರಥಿ 2011

ಸೂರತ್ ಅಲ್ ಮಾಯಿದಾ 35 ನೇ ಸೂಕ್ತಿಯು ತವಸ್ಸುಲ್, ಇಸ್ತಿಗಾಸಕ್ಕೆ ಪುರಾವೆಯಾಗಿದೆಯೇ?

ಕೇರಳದಲ್ಲಿ ಸಮಸ್ತ ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಜ್ಯ ಅಹ್ಲುಸ್ಸುನ್ನತ್'ನ ಸೂಫಿಗಳು ಹಾಗೂ ಬರೇಲ್ವಿಗಳು *ಅಲ್ ಮಾಇದಾ* ಸೂರಃದ ಈ *35 ನೇ ಸೂಕ್ತಿಯನ್ನು* ದುರ್ವ್ಯಾಖ್ಯಾನ ಗೊಳಿಸಿ ಇಲ್ಲಿ ಹೇಳಿರುವ ಸಮೀಪ ಮಾರ್ಗ ಮರಣಹೊಂದಿದ ಮಹಾ ಪುರುಷರಾಗಿದ್ದಾರೆ ಆದುದರಿಂದ ಅವರನ್ನು ಅಲ್ಲಾಹನೊಂದಿಗೆ
ಮಧ್ಯವರ್ತಿಯನ್ನಾಗಿಸಿ ಪ್ರಾರ್ಥಿಸಬಹುದು ಎಂದು ತಮ್ಮ ಕಬರ್ ಆರಾಧನಾ ಶಿರ್ಕನ್ನು ಸಮರ್ಥಿಸುತ್ತಾರೆ.

ಜಗತ್ಪ್ರಸಿದ್ಧ ತಫ್ಸೀರ್'ನ ವಿದ್ವಾಂಸರು ಈ ವಿಷಯದಲ್ಲಿ ಏನು ಅಭಿಪ್ರಾಯ ಪಟ್ಟಿದ್ದಾರೆ ಎಂದು ನೋಡೋಣ.

*1.ಇಮಾಮ್ ಇಬ್ನ್ ಕಸೀರ್ (رحمه الله) ಹೇಳುತ್ತಾರೆ;*

ಅಲ್ಲಾಹನು ಅವನ ಸತ್ಯವಿಶ್ವಾಸಿ ದಾಸರಲ್ಲಿ "ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ" ಎಂದು ಆಜ್ಞಾಪಿಸುತ್ತಾನೆ. ಇದನ್ನು ವಿಧೇಯತೆಯ ಜೊತೆಗೂಡಿ ಹೇಳುವಾಗ, ಇದರ ಅರ್ಥ ಅಲ್ಲಾಹನು ಹರಾಂ(ನಿಷಿದ್ಧ) ಗೊಳಿಸಿದ ವಿಷಯಗಳಿಂದ ದೂರವಿರುವುದು ಎಂದಾಗುತ್ತದೆ. ನಂತರ ಅಲ್ಲಾಹನು ಹೇಳುತ್ತಾನೆ; "ಮತ್ತು ಅವನೆಡೆಗೆ ಸಮೀಪಗೊಳ್ಳಲಿರುವ ಮಾರ್ಗವನ್ನು ಹುಡುಕಿರಿ." "ಸುಫ್ಯಾನ್ ಅತ್ತವ್ರೀ" "ತಲಾಲಾ" ರವರಿಂದ ಕೇಳಿರುವುದಾಗಿ ಹೇಳುತ್ತಾರೆ ಅವರು "ಅತಾ" ಅವರಿಂದ ಅವರು "ಇಬ್ನ್ ಅಬ್ಬಾಸ್" (رضى الله عنه) ರವರಿಂದ ಕೇಳಿರುತ್ತಾರೆ; *ಇದರ ಅರ್ಥ "ಅಲ್ಲಾಹನಿಗೆ ಹತ್ತಿರವಾಗುದು."* ಎಂದಾಗಿದೆ. ಇದನ್ನು ಮುಜಾಹಿದ್, ಅಬೂ ವಾಯಿಲ್, ಅಲ್ ಹಸನ್, ಕತಾದ, ಅಬ್ದುಲ್ಲಾಹ್ ಇಬ್ನ್ ಕಸೀರ್, ಅಲ್ ಸದ್ದಿ , ಇಬ್ನ್ ಝಾಯಿದ್ (رحمه الله) ಮತ್ತಿತರರು ಕೂಡ ಹೇಳಿದ್ದಾರೆ. ಕತಾದ ಹೇಳುತ್ತಾರೆ; ಇದರ ಅರ್ಥ *"ಅನುಸರಣೆಯ ಮೂಲಕ ಅಲ್ಲಾಹನಿಗೆ ಹತ್ತಿರವಾಗುವುದು ಹಾಗೂ ಅವನು ಸಂತುಷ್ಠಗೊಳ್ಳುವ ಕರ್ಮವನ್ನು ಮಾಡುವುದು."*
ಇಬ್ನ್ ಝಾಯಿದ್ (رحمه الله)
ಅದರೊಟ್ಟಿಗೆ ಈ ಆಯತನ್ನು ಓದುತ್ತಾರೆ;

*"ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಸ್ವತಃ ತಮ್ಮ ಪ್ರಭುವಿನೆಡೆಗೆ ಹತ್ತಿರವಾಗಲು ಮಾರ್ಗಗಳನ್ನು ಅರಸುತ್ತಿರುವರು."*

[ಅಲ್ ಇಸ್ರಾ - 17/57]

ಈ ವಿಷಯದಲ್ಲಿ ಈ ಇಮಾಮ್'ಗಳು ಹೇಳಿರುವುರ ಬಗ್ಗೆ ಮುಫಸ್ಸಿರೀನ್'ಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಲ್ಲ.

ಸಮೀಪ ಮಾರ್ಗ ಅಥವಾ ಹಾದಿ ಎಂಬುದರ ಅರ್ಥ ಒಬ್ಬ ದಾಸನು ಆ ಮೂಲಕ ತನ್ನ ಗುರಿಯನ್ನು ತಲುಪುವುದು ಎಂದಾಗಿದೆ.

*[ತಫ್ಸೀರ್ ಇಬ್ನ್ ಕಸೀರ್ - 2/53, 54. 5/35 ರ ತಫ್ಸೀರ್'ನಲ್ಲಿ]*

*2. ತಫ್ಸೀರ್ ಜಲಾಲೈನಿ.*

ತಫ್ಸೀರ್ ಜಲಾಲೈನಿಯಲ್ಲಿ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ; "ಓ ಸತ್ಯವಿಶ್ವಾಸಿಗಳೇ ಅಲ್ಲಾಹನನ್ನು ಭಯಪಡಿರಿ, ಅವನ ಶಿಕ್ಷೆಯನ್ನು ಭಯಪಡಿರಿ ಅವನ ಆಜ್ಞೆಗೆ ವಿಧೇಯನಾಗುವ ಮೂಲಕ. ಮತ್ತು "ಹುಡುಕಿರಿ" ಎಂಬುದರ ಅರ್ಥ ಆ ವಿಧೇಯತೆಯ ಮೂಲಕ ಅಲ್ಲಾಹನಿಗೆ ಹತ್ತಿರವಾಗುವುದಾಗಿದೆ. ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ಅವನ ಧರ್ಮವನ್ನು ಮೇಲೆತ್ತುವ ಸಲುವಾಗಿ. ಆ ಕಾರಣದಿಂದ ನೀವು ವಿಜಯಿಯಾಗುವಿರಿ.

*[ತಫ್ಸೀರ್ ಜಲಾಲೈನಿ - 5/35 ರ ತಫ್ಸೀರ್'ನಲ್ಲಿ]*

*3.ಇಮಾಮ್ ಫಕ್ರುದ್ಧೀನ್ ರಾಝಿ (رحمه الله) ಹೇಳುತ್ತಾರೆ;*

*(ಓ ಮುಸ್ಲಿಮರೇ) ಯಹೂದಿಗಳು ಯಾವ ರೀತಿ ಅವಿಧೇಯರಾಗಿ ಮತ್ತು ಪಾಪಗಳಿಂದಾಗಿ ವಿಧೇಯತೆಯಿಂದ ದೂರ ಸರಿದಿದ್ದಾರೆ ಎಂಬುದನ್ನು ತಾವು ನೋಡಿಲ್ಲವೇ. ಆದುದರಿಂದ ಅವರಿಗೆ ವಿರುದ್ಧವಾಗಿ ವರ್ತಿಸಿರಿ. ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸುವ ವಿಷಯದಲ್ಲಿ ಎಚ್ಚರ ವಹಿಸಿರಿ. ಅವನ ಆಜ್ಞೆಗೆ ವಿಧೇಯರಾಗುವ ಮೂಲಕ ಅವನ ಸಾಮೀಪ್ಯವನ್ನು ಹುಡುಕಿರಿ.*

ಅಲ್ಲಾಹನು ಇಲ್ಲಿ ಯಹೂದಿ ಮತ್ತು ಕ್ರೈಸ್ತರು ಹೇಳಿದ್ದನ್ನು ಉಲ್ಲೇಖಿಸಿಯಾಗಿದೆ ಹೇಳಿರುವುದು.

*ಯಹೂದರು ಮತ್ತು ಕ್ರೈಸ್ತರು ಹೇಳಿದರು: ‘ನಾವು ಅಲ್ಲಾಹುವಿನ ಮಕ್ಕಳಾಗಿರುವೆವು ಮತ್ತು ಅವನಿಗೆ ಅತ್ಯಂತ ಪ್ರೀತಿಪಾತ್ರರಾಗಿರುವೆವು.’*

*[ಅಲ್ ಮಾಇದಾ - 18]*

*ಅರ್ಥಾತ್ ಯಹೂದಿ ಮತ್ತು ಕ್ರೈಸ್ತರು ನಾವು ಪ್ರವಾದಿಗಳ ಮಕ್ಕಳೆಂದೂ ಹಾಗೂ  ತಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಆಚರಿಸುವವವರೂ ಆಗಿದ್ದಾರೆ. ನಂತರ ಅಲ್ಲಾಹನು ಹೇಳುತ್ತಾನೆ; ಓ ವಿಶ್ವಾಸಿಗಳೇ ನಿಮ್ಮ ಪೂರ್ವಿಕರ ಬಗ್ಗೆ ಹೆಮ್ಮೆ ಪಡುವುದನ್ನು ನಿಲ್ಲಿಸಿ. ಮತ್ತು ಅಲ್ಲಾಹನಿಗೆ ಭಯಪಟ್ಟು ಅವನಿಗೆ ಸಮೀಪಗೊಳ್ಳುವ ಮಾರ್ಗವನ್ನು ಹುಡುಕಿರಿ ಎಂದು.*

*[ಮಫಾತೀಹ್ ಅಲ್ ಗೈಬ್. ಸೂರಃ ಅಲ್ ಮಾಇದಾ 35 ರ ಸೂಕ್ತಿಯ ವಿವರಣೆಯಲ್ಲಿ]*

✍🏽 ನೌಫಲ್ ಕೆರೀಂ.