ಮಲಯಾಳಂ ಮೂಲ - ಅಬ್ದುಲ್ಲತೀಫ್ ಸುಲ್ಲಮಿ ಮಾರಾಂಜೇರಿ.
ಕನ್ನಡಾನುವಾದ - ಅಬ್ದುಲ್ ಜಲೀಲ್ ಅರ್ಲ.
ಆಧುನಿಕ ಪುರೋಹಿತ ವರ್ಗವು ಇಸ್ಲಾಮಿನ ನೈಜ ರೂಪವನ್ನು ವಿಕೃತಗೊಳಿಸಿ ಜನಸಾಮಾನ್ಯರಿಗೆ ಕಷ್ಟಕರವಾಗುವ ರೀತಿಯಲ್ಲಿ ಅಂಧವಿಶ್ವಾಸವನ್ನೂ, ಅನಾಚಾರಗಳನ್ನೂ , ಅನ್ಯಧರ್ಮೀಯರ ಸಂಪ್ರದಾಯಗಳನ್ನೂ ಕ್ರೂಢೀಕರಿಸಿ ಸತ್ಕರ್ಮಗಳೆಂಬ ಸುಂದರ ನಾಮವನ್ನಿಟ್ಟು, ಪರಿಶುದ್ಧವಾದ ಇಸ್ಲಾಂ ಧರ್ಮದಲ್ಲಿ ಕಲಬೆರೆಕೆ ಮಾಡಿ ತಮ್ಮ ಸ್ವಾರ್ಥ ಸಿದ್ಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮುಗ್ಧ ಜನರ ಮನವೊಲಿಸಿ ಇಸ್ಲಾಮನ್ನು ಅಧೋಗತಿಗೆ ತಳ್ಳುತ್ತಿರುವ ವಿಷಯವು ಖೇದಕರವಾಗಿದೆ. ಇವರ ಮೊಂಡುವಾದಗಳನ್ನೇ ವೇದವಾಕ್ಯವೆಂದು ನಂಬಿ ಸಾಮಾನ್ಯ ಜನ ಪರಿಶುದ್ಧ ಲಾಹಿಲಾಹ ಇಲ್ಲಲ್ಲಾಹ್ ಎಂಬ ಕಲಿಮತುತ್ತೌಹೀದಿನ ಮಹತ್ವವನ್ನೇ ಅಪಮಾನಿಸುತ್ತಿದ್ದಾರೆ.
ಸತ್ಕರ್ಮಗಳನ್ನು ಹೇಗೆ ಬೇಕಾದರೂ ನಿರ್ವಹಿಸಬಹುದು, ತಮಗೆ ಇಷ್ಟ ಬಂದ ರೀತಿಯಲ್ಲಿ ಬದಲಿಸಬಹುದೆಂಬ ವಾದವನ್ನು ಇಸ್ಲಾಂ ಯಾವತ್ತೂ ಅಂಗೀಕರಿಸುವುದಿಲ್ಲ. ಆ ರೀತಿ ಪ್ರಚಾರಪಡಿಸುವವರ ಉದ್ದೇಶಗಳು ಮಾತ್ರ ಒಳ್ಳೆಯದಾಗಿದ್ದರೆ ಸಾಲದು. ಪ್ರವರ್ತಿಸುವ ಕಾರ್ಯಗಳು ಇಸ್ಲಾಮಿನ ಮೂಲಭೂತ ಆಧಾರ ಸ್ಥಂಭವಾದ ಪವಿತ್ರ ಖುರ್ ಆನಿನಲ್ಲಾಗಲೀ, ಸಹೀಹಾದ ಹದೀಸ್ ನಲ್ಲಾಗಲೀ ದಾಖಲಿಸಲ್ಪಟ್ಟಿದೆಯೇ ಎಂಬುದನ್ನು ಮೊತ್ತ ಮೊದಲ ಅರಿತಿರಬೇಕು ಅದು ಬಿಟ್ಟು ಪೂರ್ವಿಕರು ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಂತಹ ಆಚಾರ ಆನಾಚಾರಗಳನ್ನು ಅಂಧವಾಗಿ ಅನುಕರಿಸುವುದು ಬುದ್ಧಿ ಜೀವಿಯಾದ ಸತ್ಯ ವಿಶ್ವಾಸಿಗೆ ಭೂಷಣವಲ್ಲ. ಅಲ್ಲಾಹು ಖುರ್ ಆನಿನಲ್ಲಿ ಹೇಳುತ್ತಾನೆ "ಯಾರದರೂ ಪರಲೋಕವನ್ನಿಷ್ಟಪಟ್ಟು ಅದಕ್ಕಾಗಿ ಪ್ರಯತ್ನಿಸಬೇಕಾದ ರೀತಿಯಲ್ಲಿ ಪ್ರಯತ್ನಿಸಿದರೆ ಮತ್ತು ಅವನು ಸತ್ಯವಿಶ್ವಾಸಿ ಯಾಗಿದ್ದರೆ ಅಂತಹ ಪ್ರತಿಯೊಬ್ಬನ ಪ್ರಯತ್ನವೂ ಕೃತಾರ್ಥವಾಗುವುದು" (ಅಲ್ ಇಸ್ರಾಅ19). ಆದ್ದರಿಂದ ಪರಲೋಕದ ಉದ್ದೇಶದಿಂದ ನಾವು ಪ್ರವರ್ತಿಸುವ ಯಾವುದೇ ಕಾರ್ಯಗಳಾದರೂ ಸರಿ ಈ ಮೇಲೆ ಹೇಳಿದ ಖುರ್ ಆನಿನಲ್ಲಿರುವ ಸೂಕ್ತದಲ್ಲಿರುವ ನಿಬಂದನೆಗಳಿಗೆ ಬದ್ಧವಾದವುಗಳಾಗಿದೆಯೇ ಎಂಬುದನ್ನು ಅರಿತಿರಬೇಕು. ಅದರ ಹೊರತು ಅವರು ಮಾಡಿದ ಸತ್ಕರ್ಮಗಳೆಲ್ಲವೂ ನಿಷ್ಪ್ರಯೋಜಕವಾಗುವುದು ಎಂದು ಖುರ್ ಆನ್ ತಿಳಿಸುತ್ತದೆ.
ಅಲ್ಲಾಹು ಪವಿತ್ರ ತಿಂಗಳುಗಳೆಂದು ಪ್ರಖ್ಯಾಪಿಸಲ್ಪಟ್ಟ ನಾಲ್ಕು ತಿಂಗಳುಗಳಲ್ಲಿ ರಜಬ್ ಕೂಡ ಒಂದು ಎಂಬೂದನ್ನು ಖುರ್ ಆನ್ ಸೂಚುಸುತ್ತದೆ "ನಿಶ್ಚಯವಾಗಿಯೂ ಅಲ್ಲಾಹು ಭೂಮಿ ಆಕಾಶಗಳನ್ನು ಸೃಷ್ಟಿಸಿದಂದಿನಿಂದ ಅಲ್ಲಾಹನ ಲಿಖಿತದಲ್ಲಿ ತಿಂಗಳುಗಳ ಸಂಖ್ಯೆ ಹನ್ನೆರಡು ಅವುಗಳಲ್ಲಿ ನಾಲ್ಕು ತಿಂಗಳುಗಳು ಯುದ್ಧ ನಿಷಿದ್ಧವಾದವುಗಳಾಗಿದೆ (ಸೂರತೌಬಾ36) ಆ ನಾಲ್ಕು ತಿಂಗಳು ಯಾವುದು ಎಂಬುದನ್ನು ಹದೀಸ್ ನಲ್ಲಿ ಉಲ್ಲೇಖಿಸಲಾಗಿದೆ, ದುಲ್,ಕ,ಅದ; ದುಲ್ ಹಜ್ಜ್; ಮುಹರ್ರಮ್ ಹೀಗೆ ಪ್ರಾರಂಭವಾದ ಮೂರು ತಿಂಗಳು ಮತ್ತೊಂದು ಜಮಾತುಲ್ ಆಖರ್ ನ ಮತ್ತು ಶಹಬಾನ್ ನ ಮಧ್ಯದಲ್ಲಿ ಬರುವ ರಜಬ್ ತಿಂಗಳಾಗಿದೆ ಅದು. (ಮುತ್ತಫಕ್ಕುನ್ ಅಲೈಹಿ)
ರಜಬ್ ತಿಂಗಳಲ್ಲಿ ಇಂದಿನ ಕಾಲದಲ್ಲಿ ನಡೆಯುವ ಅನಾಚಾರಗಳು, ಅಸಂಬದ್ಧ ಪ್ರವರ್ತನೆಗಳು ಇಸ್ಲಾಮಿನ ಆಶಯಾದರ್ಶಗಳೀಗೆ ತೀರಾ ವಿರುದ್ಧವಾದವುಗಳಾಗಿದೆ. ಪವಿತ್ರ ಖುರ್ ಅನಿನಲ್ಲಾಗಲೀ ಸ್ವಹೀಹಾದ ಹದೀಸ್ ಗಳಲ್ಲಗಲೀ ಇಂತಹ ಆಚಾರಗಳಿಗೆ ಯಾವುದೇ ಆಧಾರ ಇಲ್ಲ, ಆದರೂ ಪುರೋಹಿತ ವರ್ಗವು ಅವುಗಳನ್ನೆಲ್ಲಾ ಲೆಕ್ಕಿಸದೆ ತಮ್ಮದೇ ಆದ ನೂತನ ಸಿದ್ಧಾಂತಗಳನ್ನು ಸೃಷ್ಟಿಸಿ ಮುಸ್ಲಿಂ ಸಮುದಾಯದಲ್ಲಿ ಪ್ರಚಾರ ಪಡಿಸುತ್ತಿದೆ. ಉದಾಹರಣೆಗೆ ಕೇರಳದಂತಹ ರಾಜ್ಯದಲ್ಲಿ ರಜಬ್ ತಿಂಗಳನ್ನು ಮಿಅರಾಜ್ ತಿಂಗಳೆಂದು ಭಾವಿಸಿ ಆದರಿಸಿ ಕೆಲವು ಅನಾಚಾರಗಳನ್ನು ನಿರ್ವಹಿಸುವುದು ಕಂಡುಬರುತ್ತಿದೆ. ಪ್ರವಾದಿ ಸ.ಅ. ರವರ ಮಿಅರಾಜ್ ಯಾತ್ರೆಯು ಪ್ರಸ್ತುತ ತಿಂಗಳಿನಲ್ಲಿಯೇ ನಡೆದಿದೆ ಎಂಬ ವಿಷಯದಲ್ಲಿ ಚರಿತ್ರೆ ಗಾರರೆಡೆಯಲ್ಲಿ ಒಮ್ಮತಾಭಿಪ್ರಾಯವಿಲ್ಲ, ಆದರೂ ಆ ಸಂಭವವು ಪ್ರಸ್ತುತ ತಿಂಗಳಿನಲ್ಲಿಯೇ ನಡೆದಿದೆ ಎಂದು ತಿಳಿದರೂ ಕೂಡ ಅದಕ್ಕೆ ಸಂಬಂದಿಸಿದ ಯಾವುದೇ ಪ್ರತ್ಯೇಕ ಇಬಾದತ್ ಗಳಾಗಲೀ, ಆಚಾರಗಳಾಗಲೀ ನಿರ್ದೇಶಿಸಲಾಗಿಲ್ಲ. ಮತ್ತು ರಜಬ್ ತಿಂಗಳ ಪ್ರಥಮ ಶುಕ್ರವಾರ ರಾತ್ರಿ ರಗಾಇಬ್ ಎಂಬ ಹೆಸರಿನ ಪ್ರತ್ಯೇಕ ಸುನ್ನತ್ ನಮಾಝ್ ಗಳಿವೆ ಎಂದು ಕಾಣುವ ಎಲ್ಲಾ ಹದೀಸ್ ಗಳೂ ದುರ್ಬಲವಾಗಿರುವುದು ಎಂದು ಇಬ್ನುಅಜರುಲ್ ಅಸ್ಗಲಾನಿ(ರ) ಅವರು ತಮ್ಮ ಲತ್ವಾಇಫ್ ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ. ಮುಂಗಾಮಿಗಳಲ್ಲಿ ಇಂತಹ ಒಂದು ನಮಾಝ್ ನ ಕುರಿತು ದಾಖಲಿಸದಿರುವುದರಿಂದ ಅದೊಂದು ಬಿದ್ ಅತ್ ಎಂಬ ವಿಷಯದಲ್ಲಿ ಸಂಶಯವಿಲ್ಲ.
ಹಲವು ಕಡೆ ರಜಬ್ ತಿಂಗಳ 27 ರಂದು ಉಪವಾಸ ವೃತ ಮಾಡುವುದು ಕಂಡುಬರುತ್ತಿದೆ ಇದೂ ಕೂಡ ಆಧಾರ ರಹಿತ ಎಂದು ಇಬ್ನುಅಜರುಲ್ ಅಸ್ಗಲಾನಿ ತಮ್ಮ "ತಬ್ ಯಿನುಲ್ ಉಜೂದ್ ಫಿ ಮಾ ವರದ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮುಹರ್ರಮ್ 9 ಮತ್ತು 10 ಶವ್ವಾಲ್ ನಲ್ಲಿ 6 , ದುಲ್ ಹಜ್ಜ್ 9 ಅದೇ ರೀತಿ ಅದೇ ರೀತಿ ಪ್ರತೀ ತಿಂಗಳ 13,14,15, ದಿವಸಗಳಲ್ಲಿ ಉಪವಾಸವು ಸುನ್ನತ್ತಾಗಿದೆ ಎಂಬ ವಿಷಯದಲ್ಲಿ ಅಭಿಪ್ರಾಯ ವ್ಯತ್ಯಾಸವಿಲ್ಲ. ಅದು ಪ್ರವಾದಿ ಸ.ಅ. ಚರ್ಯೆ ಆಗಿರುವುದರಿಂದ ಸುನ್ನತ್ತಾಗಿ ಪರಿಗಣಿಸಲ್ಪಡುವುದು ಹೊರತು ಉಳಿದ ಯಾವುದೇ ರೀತಿಯ ಒಳ್ಳೆಯ ಕಾರ್ಯಗಳೇ ಆಗಲಿ ಪ್ರವಾದಿ ಸ.ಅ. ರವರ ಚರ್ಯೆಯಲ್ಲಿಲ್ಲದ್ದು ಬಿದ್ ಅತ್ ಎಂಬ ವಿಷಯವು ಗಮನೀಯ.
ಅದೇ ರೀತಿ ಪ್ರವಾದಿ ಸ.ಅ. ರವರು ರಜಬ್ ತಿಂಗಳಲ್ಲಿ ಉಮ್ರ ಮಾಡಿರುವುದಾಗಲೀ, ಆ ತಿಂಗಳ ಉಮ್ರಕ್ಕೆ ಪ್ರತ್ಯೇಕ ಪುಣ್ಯವಿದೆ ಎಂದು ಹೇಳಿರುವುದಾಗಲೀ ಯಾವುದೇ ಹದೀಸ್ ನಲ್ಲಿ ಲಿಖಿತವಾಗಿಲ್ಲ. ಪ್ರವಾದಿ ಸ.ಅ. ರವರು ಜೀವಿತ ಕಾಲಾವಧಿಯಲ್ಲಿ ನಾಲ್ಕು ಉಮ್ರ ಮಾಡಿರುವುದಾಗಿ ಸಹೀಹ್ ಆದ ಹದೀಸ್ ಗಳಿಂದ ತಿಳಿದುಬರುತ್ತದೆ. ಅದರಲ್ಲಿ ಮೂರು ಉಮ್ರವು ದುಲ್ ಕ ಅದ ತಿಂಗಳಲ್ಲಿಯೂ ಮತ್ತೊಂದು ತಮ್ಮ ಹಜ್ಜತುಲ್ ವಿದಾಅ ದ ದುಲ್ ಹಜ್ಜ್ ತಿಂಗಳಲ್ಲಾಗಿದೆ. ರಮಳಾನ್ ತಿಂಗಳ ಉಮ್ರಕ್ಕೆ ಹೆಚ್ಚಿನ ಪುಣ್ಯವಿದೆಯೆಂದೂ, ರಮಳಾನಿನಲ್ಲಿ ಉಮ್ರ ಮಾಡಿದವನೀಗೆ ನನ್ನೊಂದಿಗೆ ಹಜ್ಜ್ ಮಾಡಿದ ಪ್ರತಿಫಲವಿದೆಯೆಂದೂ ಪ್ರವಾದಿ ಸ.ಅ. ಹೇಳಿರುವುದಾಗಿ ಸಹೀಹ್ ಆದ ಹದೀಸ್ ಗಳಲ್ಲಿ ರುಜುವಾತಾಗಿದೆ. ಆದರೆ ರಜಬ್ ತಿಂಗಳ ಉಮ್ರಕ್ಕೆ ಹೆಚ್ಚಿನ ಪುಣ್ಯವಿದೆ ಎಂಬ ವಿಷಯವು ಆಧಾರ ರಹಿತ ಎಂದು ಇಬ್ನು ಖಯ್ಯುಮ್ ಜೌಸಿ(ರ) ತಮ್ಮ ಸಾದುಲ್ ಮ,ಆದ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆದುದರಿಂದ ರಜಬ್ ತಿಂಗಳಲ್ಲಿ ಯಾವುದೇ ಪ್ರತ್ಯೇಕ ಆರಾಧನೆಗಳಿಲ್ಲ ಎಂದು ಈ ಮೇಲಿನ ಉದ್ಧರಣಿಗಳಿಂದ ಸ್ಪಷ್ಟವಾಗುತ್ತದೆ.
ಪವಿತ್ರ ಕುರ್ ಆನಿನಲ್ಲಿ ಅಲ್ಲಾಹು ಹೇಳುತ್ತಾನೆ "ಓ ಪೈಗಂಬರರೇ, ಇವರೊಡನೆ ಹೇಳಿರಿ ತಮ್ಮ ಕರ್ಮಗಳಲ್ಲಿ ಅಧಿಕ ಪರಾಜಿತರು ಯಾರೆಂದು ತಿಳಿಸಲೇ ತಮ್ಮ ಲೌಕಿಕ ಜೀವನದಲ್ಲಿ ಅವರ ಸರ್ವ ಪ್ರಯತ್ನ, ಪರಿಶ್ರಮಗಳೂ ಸನ್ಮಾರ್ಗದಿಂದ ಗುರಿತಪ್ಪಿ ಹೊಗಿದ್ದು ತಾವು ಮಾಡುತ್ತಿರುವುದೆಲ್ಲವೂ ಸರಿಯೇ ಎಂದು ತಿಳಿದು ಕೊಂಡಿದ್ದರೋ ಅವರು ತಮ್ಮ ಪ್ರಭುವಿನ ವಚನಗಳನ್ನೂ, ಅವನ ಮುಂದೆ ಹಾಜರಾಗಲಿಕ್ಕಿದೆ ಎಂಬುದನ್ನು ನಿರಾಕರಿಸಿದವರು. ಆದುದರಿಂದ ಅವರ ಸಕಲ ಕರ್ಮಗಳೂ ವ್ಯರ್ಥವಾಗಿ ಬಿಟ್ಟವು . ನಾವು ಪುನರುತ್ಥಾನ ದಿನ ಅವರೀಗೆ ಯಾವ ಮಹತ್ವ ವನ್ನೂ ನೀಡಲಾರೆವು. ಅವರು ಸತ್ಯವನ್ನು ನಿಷೇಧಿಸಿದುದಕ್ಕಾಗಿಯೂ, ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದುದಕ್ಕಾಗಿಯೂ ಅವರ ಪ್ರತಿಫಲ ನರಕವಾಗಿರುತ್ತದೆ. (ಅಲ್ ಕಹ್ಫ್ 103-106)
ಆದುದರಿಂದ , ಸಹೋದರರೇ ಚಿಂತಿಸಿ ನಾವು ಎಷ್ಟೊಂದು ಕಷ್ಟಪಟ್ಟು ಸತ್ಕರ್ಮಗಳೆಂದು ಭಾವಿಸಿ ಮಾಡಿದ ಕರ್ಮಗಳೆಲ್ಲವೂ ನಿಷ್ಪ್ರಯೋಜಕವೂ ಜಹನ್ನಮ್ ಗೇ ಸೇರುವಂತ ದಾರಿಮಾಡಿ ಕೊಡುವುದೆಂದೂ ಖುರಾಅನ್ ಸೂಚಿಸುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕರ್ಮಗಳಿಗೂ ಖುರ್ ಆನಿನಲ್ಲಾಗಲೀ ಸ್ವಹೀಹಾದ ಹದೀಸ್ ಗಳಲ್ಲಾಗಲೀ ಆಧಾರವಿದೆಯೇ ಎಂದು ಪರೀಕ್ಷಿಸಬೇಕು, ಆಧಾರ ರಹಿತ ವಾದಂತಹ ಯಾವುದೇ ಕರ್ಮಗಳೇ ಆಗಿರಲಿ ಅವುಗಳನ್ನು ಉಪೇಕ್ಷಿಸುವುದೇ ಒಳಿತು. ಅದು ಬಿಟ್ಟು, ಅದು ಒಳ್ಳೆಯದಲ್ಲವೇ ಇದು ಒಳ್ಳೆಯದಲ್ಲವೇ ಎಂಬ ವಾದಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಪ್ರವಾದಿ ಸ.ಅ. ಹೇಳಿರುವರು ಸ್ವರ್ಗ ಪ್ರವೇಶಿಸುವಂತಹ ಹಾಗೂ ನರಕದಿಂದ ರಕ್ಷಣೆ ಹೊಂದುವಂತಹ ಯಾವುದೇ ಒಂದು ಕಾರ್ಯಗಳನ್ನೂ ನಾನು ನಿಮ್ಮಲ್ಲಿ ಹೇಳದೆ ಹೋಗುವುದಿಲ್ಲ ಎಂದು ಆದುದರಿಂದ ಒಬ್ಬ ಸತ್ಯವಿಶ್ವಾಸಿಗೆ ಸ್ವರ್ಗ ಪ್ರವೇಶಿಸುವಂತಹ ಎಲ್ಲಾ ರೀತಿಯ ಅರಾಧನೆಗಳನ್ನೂ, ಸತ್ಕರ್ಮಗಳನ್ನೂ ಪ್ರವಾದಿ ಸ.ಅ. ಕಲಿಸಿಕೊಟ್ಟಿರುತ್ತಾರೆ. ಅವುಗಳನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಂಡು ಪ್ರವಾದಿ ಸ.ಅ. ರನ್ನೂ ಪ್ರೀತಿಸಿ ಸಲಫುಸ್ವಾಲಿಹೀನ್ ಗಳ ಪಾದವನ್ನು ಅನುಸರಿಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ ಅವನ ಅಂತಿಮ ದಿನದ ವಿಚಾರಣೆಯಲ್ಲಿ ವಿಜಯಿಗಳಾಗೋಣ. ಅಲ್ಲಾಹು ನಮಗೆಲ್ಲರಿಗೂ ಸತ್ಯವನ್ನು ಸತ್ಯವಾಗಿ ತಿಳಿಯಲು ಹಾಗೂ ಮಿಥ್ಯವನ್ನು ಗುರುತಿಸಿ ಅದರಿಂದ ದೂರ ಉಳಿಯಲು ತೌಫೀಖ್ ನೀಡಲಿ. ಆಮೀನ್.
✍ ಅಬೂ ಹಿಲಾಲ್ ಅರ್ಲ.
------------'---------'''--------
ಬಿದ್ಅತ್ ನ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಸಂಪರ್ಕಿಸಿ.
https://islaminkannada.blogspot.in/2016/12/blog-post.html?m=1