13 Mar 2022

ಸ್ತ್ರೀಯರ ವಸ್ತ್ರಧಾರಣೆ: ಇಸ್ಲಾಮ್ ಏನು ಹೇಳುತ್ತದೆ?

 


ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಇತರರ ಮುಂದೆ ಪರಿಚಯಿಸುವ ಪ್ರಥಮ ಉಪಾಧಿ ವಸ್ತ್ರಧಾರಣೆಯಾಗಿದೆ. ಓರ್ವರು ಧರಿಸಿದ ವಸ್ತ್ರವನ್ನು ನೋಡಿ, ಆ ವ್ಯಕ್ತಿ ಎಂತಹವನೆಂದು ಅಂದಾಜಿಸಲು ಸಾಧ್ಯವಾಗುತ್ತದೆ. ರಾಜ, ನವಾಬರ ವಸ್ತ್ರ, ಧಾರ್ಮಿಕ ವಿದ್ವಾಂಸರುಗಳ ವಸ್ತ್ರ, ಅಹಂಕಾರಿಗಳ, ಆತ್ಮಪ್ರಶಂಸಕರ ವಸ್ತ್ರ, ಆಡಂಬರದ ವಸ್ತ್ರ, ಮೂರ್ಖರ ವಸ್ತ್ರ, ಅನಾಗರಿಕರ ವಸ್ತ್ರ… ಇವೆಲ್ಲವೂ ಅವರವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಸತ್ಯ ವಿಶ್ವಾಸಿಗಳ ಹಾಗೂ ವಿಶ್ವಾಸಿನಿಯರ ವಸ್ತ್ರಧಾರಣೆಯಲ್ಲಿ ಇವೆಲ್ಲವುಗಳಿಗಿಂತ ಸಹಜವಾಗಿಯೇ ವ್ಯತ್ಯಾಸವಿರುತ್ತದೆ. ಆದ್ದರಿಂದಲೇ ಅವರ ವೇಷ ವಿಧಾನವು ಅನಿವಾರ್ಯವಾಗಿ ಇತರರಿಗಿಂತ ಭಿನ್ನವಾಗಿರಬೇಕು. ದೃಷ್ಟಿ ಹಾಯಿಸುವ ಪ್ರತಿಯೊಬ್ಬರಲ್ಲೂ ಗೌರವ ಮೂಡಿಸುವ ಘನತೆ ಮತ್ತು ಸಂಸ್ಕಾರಯುತವಾಗಿ ಕಾಣುವ ಬಟ್ಟೆಗಳನ್ನು ಬಯಸುತ್ತಾರೆ.


ನೈತಿಕತೆಯು ಹದಗೆಡುತ್ತಿರುವ ಇಂದಿನ ಕಾಲದಲ್ಲೂ ಉತ್ತಮ ರೀತಿಯ ವಸ್ತ್ರವನ್ನು ಧರಿಸಿದ ಸ್ತ್ರೀಯರನ್ನು ಬಹಳ ಗೌರವದಿಂದ ಕಾಣುತ್ತಾರೆ ಎಂಬುದು ವಾಸ್ತವಿಕತೆಯಾಗಿದೆ. ಸಭ್ಯ ಉಡುಪು ಧರಿಸಿರುವ ಮಹಿಳೆಯರು ಅನುಭವಿಸುವ ಸುರಕ್ಷತೆಯ ಪ್ರಜ್ಞೆಯು ಇತರ ಮಹಿಳೆಯರಿಗೆ ತುಲನಾತ್ಮಕವಾಗಿ ಕಡಿಮೆಯಾಗಿರುತ್ತದೆ ಎಂಬುದು ಅನುಭವ ಸತ್ಯ. ತಮ್ಮ ದೇಹದ ಭಾಗವನ್ನು ಪ್ರದರ್ಶಿಸಿ, ಪುರುಷರ ಗಮನವನ್ನು ಸೆಳೆಯುವ ರೀತಿಯ ವಸ್ತ್ರಗಳನ್ನೂ, ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಹೊರ ಹೋಗುವ ಮಹಿಳೆಯರು ಕಡಿಮೆ ಸುರಕ್ಷತೆಯನ್ನು ಅನುಭವಿಸುತ್ತಾರೆ. ಬೀದಿ ಕಾಮುಕರ ತೀಕ್ಷ್ಣ ನೋಟವನ್ನೂ, ಅಶ್ಲೀಲವಾದ ಕಮೆಂಟ್ ಗಳನ್ನು ಅವರು ಎದುರಿಸುತ್ತಾರೆ. ನೈತಿಕ ಪ್ರಜ್ಞೆಯಿರುವ ಸಮಾಜದಲ್ಲಿ ಇದು ಕಡಿಮೆ ಇರಬಹುದಾದರೂ, ನೈತಿಕ ಅಧಃಪತನಕ್ಕೆ ಒಳಗಾದ ಸಮಾಜದಲ್ಲಿ ಮಹಿಳೆಯರು ಈ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದಕ್ಕಾಗಿ ನಾವು ತೆರುತ್ತಿರುವ ಬೆಲೆಯೇನೆಂದು ದೃಶ್ಯ ಮಾಧ್ಯಮಗಳನ್ನು ವೀಕ್ಷಿಸುತ್ತಿರುವವರಿಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ಅಂತಹ ಪರಿಸರದಲ್ಲಿ ಬದುಕುತ್ತಿರುವ ಇತರ ಧರ್ಮದ ಮಹಿಳೆಯರೂ ಕೂಡಾ ಇಸ್ಲಾಮೀ ವಸ್ತ್ರಧಾರಣೆಯು ಮಹಿಳೆಯರಿಗೆ ನೀಡುವ ಸುರಕ್ಷಿತತೆಯ ಕುರಿತು ಮುಕ್ತವಾಗಿ ಬರೆದಿದ್ದಾರೆ. ಮಾನವರ ಒಳಿತು ಮತ್ತು ಕಲ್ಯಾಣಕ್ಕಾಗಿ ಅಲ್ಲಾಹನ ನಿಯಮಗಳು ಅದೆಷ್ಟು ಪ್ರಸ್ತುತವಾಗಿದೆ. ಅಲ್ಲಾಹನು ಹೇಳುತ್ತಾನೆ: “ಪೈಗಂಬರರೇ, ತಮ್ಮ ಪತ್ನಿಯರೊಡನೆಯೂ ಪುತ್ರಿಯರೊಡನೆಯೂ ಸತ್ಯವಿಶ್ವಾಸಿನಿಯರೊಡನೆಯೂ ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಬೇಕೆಂದು ಹೇಳಿಬಿಡಿರಿ. ಅವರು ಗುರುತಿಸಲ್ಪಡುವಂತಾಗಲಿಕ್ಕೂ, ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತವಾದ ವಿಧಾನ. ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.” (ಅಹ್‌ಝಾಬ್- 59)


ಮಹಿಳೆಯರ ಗೌರವ, ಘನತೆ ಹಾಗೂ ಹೆಚ್ಚು ಸಂರಕ್ಷಣೆ ನೀಡುವ ವಸ್ತ್ರಧಾರಣೆಯ ಕ್ರಮವನ್ನು ಇಸ್ಲಾಮ್ ಸೂಚಿಸುತ್ತದೆ. ಪ್ರತ್ಯೇಕವಾದ ಡ್ರೆಸ್ ಕೋಡನ್ನು ಸೂಚಿಸಿದೆ, ಉಡುಗೆಯ ಉನ್ನತ ಮಾದರಿಯನ್ನು ಕಲಿಸಲಾಯಿತು. ದೇಹದಲ್ಲಿ ಕಡ್ಡಾಯವಾಗಿ ಮರೆಸಬೇಕಾದ ಭಾಗಗಳವು ಎಂದೂ, ಅದನ್ನು ಮರೆಸಬೇಕಾದ ರೀತಿಯನ್ನು ಇಸ್ಲಾಮ್ ಕಲಿಸಿತು. ಆದರೆ ಒಂದೇ ರೀತಿಯ ವಸ್ತ್ರವನ್ನೇ ಸ್ತ್ರೀಯರು ಧರಿಸಬೇಕು, ಅದು ಮಾತ್ರ ಇಸ್ಲಾಮಿನ ವಸ್ತ್ರವೆಂದು ಇಸ್ಲಾಮ್ ತಿಳಿಸಿಲ್ಲ. ಆದರೆ ಕೆಲವರ ನಂಬಿಕೆಯೇನೆಂದರೆ ಪರ್ದಾ ಮಾತ್ರ ಇಸ್ಲಾಮ್‌ನ ವಸ್ತ್ರ ಎಂದಾಗಿದೆ. ಚೂಡಿದಾರ್, ಸೀರೆ ಮೊದಲಾದವು ಇಸ್ಲಾಮಿಕವಲ್ಲ. ಆದ್ದರಿಂದ ಪರ್ದಾ ಧರಿಸಿದ ಸ್ತ್ರೀಯರು ಮಾತ್ರ ಇಸ್ಲಾಮನ್ನು ಸರಿಯಾಗಿ ವಿಧಿ ನಿಯಮವನ್ನು ಪಾಲಿಸು ತ್ತಿದ್ದಾರೆ ಎಂಬ ತಪ್ಪುಧಾರಣೆ ಅವರಿಗಿದೆ. ಹೊಸ ರೂಪಭಾವಗಳೊಂದಿಗೆ, ಆಧುನಿಕ ಶೈಲಿಯ, ದೇಹಕ್ಕೆ ಅಂಟಿಕೊಂಡಂತಹ ಪರ್ದಾವು ಇಸ್ಲಾಮಿನ ಪರ್ದಾವಲ್ಲ ಎಂಬ ವಾಸ್ತವಿಕತೆಯನ್ನು ಅವರು ಮರೆಯುತ್ತಾರೆ.


ಹಾಗಾದರೆ ಇಸ್ಲಾಮೀ ವಸ್ತ್ರಧಾರಣೆಯೆಂದರೆ ಯಾವುದು?

ನಿಜವಾಗಿ ಹೇಳುವುದಾದರೆ ಇಸ್ಲಾಮೀ ಉಡುಪು ಎಂಬುದೇ ಇಲ್ಲ. ಆದರೆ ಇಸ್ಲಾಮೀ ದೃಷ್ಟಿಕೋನದಲ್ಲಿ ಬಟ್ಟೆಗಳನ್ನು ಧರಿಸಲು ಕೆಲವು ಉದ್ದೇಶಗಳು ಮತ್ತು ಶರತ್ತುಗಳಿವೆ. ಅವುಗಳನ್ನು ಗಮನಿಸಿದರೆ ಮುಸ್ಲಿಮ್ ಮಹಿಳೆಯು ಯಾವುದೇ ದೇಶದ ಯಾವುದೇ ಉಡುಗೆಯನ್ನು ಧರಿಸಬಹುದು. ಧರಿಸಿರುವ ವಸ್ತ್ರದ ಹೆಸರು ಅಥವಾ ಬ್ರಾಂಡ್ ಮುಖ್ಯವಲ್ಲ. ಆದರೆ ಇಸ್ಲಾಮ್ ಸೂಚಿಸಿರುವ ಶರತ್ತುಗಳು, ನಿಬಂಧನೆಗಳು ಪಾಲಿಸಲ್ಪಡುತ್ತಿದೆಯಾ ಅಥವಾ ಇಸ್ಲಾಮ್ ವಸ್ತ್ರಧಾರಣೆಗೆ ನಿಶ್ಚಯಿಸಿರುವ ಉದ್ದೇಶಗಳು ಈಡೇರಿದೆಯಾ ಎಂಬುದೇ ಮುಖ್ಯವಾಗಿದೆ.


ಅಲ್ಲಾಹನು ಹೇಳುತ್ತಾನೆ: “ಪೈಗಂಬರರೇ, ಸತ್ಯವಿಶ್ವಾಸಿನಿಯರೊಡನೆ ಹೇಳಿರಿ ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ ಮತ್ತು ತಮ್ಮ ಶೃಂಗಾರಗಳನ್ನು ತೋರಿಸದಿರಲಿ (ಆದರೆ) ಸ್ವಯಂ ಪ್ರಕಟವಾಗುವಂತಹವುಗಳನ್ನು ಹೊರತು. ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿ ಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ಇವರ ಹೊರತು ಇತರರಿಗೆ ತೋರಿಸದಿರಲಿ ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ದುರಪೇಕ್ಷೆ ಇಲ್ಲದಂತಹ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ರಹಸ್ಯ ವಿಷಯಗಳನ್ನರಿಯದ ಬಾಲಕರು. ಅವರು, ತಾವು ಮರೆಸಿಟ್ಟಿರುವಂತಹ ಅಲಂಕಾರದ ಅರಿವು ಜನರಿಗಾಗುವಂತೆ ತಮ್ಮ ಪಾದಗಳನ್ನು ನೆಲಕ್ಕೆ ಬಡಿಯುತ್ತಾ ನಡೆಯದಿರಲಿ. ಸತ್ಯ ವಿಶ್ವಾಸಿಗಳೇ! ನೀವೆಲ್ಲರೂ ಸೇರಿ ಅಲ್ಲಾಹನೊಡನೆ ಕ್ಪಮಾಯಾಚನೆ ಮಾಡಿರಿ. ನಿಮಗೆ ಯಶಸ್ಸು ಪ್ರಾಪ್ತಿಯಾಗಲೂ ಬಹುದು.” (ಸೂರಃ ಅನ್ನೂರ್- 31)

ಇದರ ವ್ಯಾಖ್ಯಾನ ಹೀಗಿದೆ:

“…ಸಮಾಜದಲ್ಲಿ ಸ್ವಚ್ಛಂದವಾಗಿ ತಿರುಗಾಡುವವರೊಂದಿಗೆ ಪರಿಗಣಿಸಲ್ಪಡಬಾರದೆಂದೂ ಉದಾತ್ತತೆ ಹಾಗೂ ಪಾವಿತ್ರ್ಯದ ಮಾದರಿಯಾಗಿ ಗುರುತಿಸಲ್ಪಡಬೇಕೆಂದು ಬಯಸುವ ಸದ್ಗುಣಶೀಲ ಮಹಿಳೆಯರೊಂದಿಗೆ ಅಲ್ಲಾಹನು ಹೀಗೆ ಹೇಳುತ್ತಾನೆ, ನೀವು ನಿಜವಾಗಿಯೂ ಸದ್ಗುಣಶೀಲರಾಗಬೇಕೆಂದು ಬಯಸುವಿರಾದರೆ ಪರಪುರುಷರ ವಕ್ರ ನೋಟವು ನಿಮಗೆ ಹಿತವೆನಿಸುವುದಿಲ್ಲ. ಮಾತ್ರವಲ್ಲ ನಿಮಗದು ಅಹಿತಕರವೆನಿಸುತ್ತದೆ. ಆದ್ದರಿಂದ ನೋಡುವವರಿಗೆ ಕೌತುಕವೆನಿಸುವಂತೆ ಪ್ರಥಮ ರಾತ್ರಿಯ ಮದುಮಗಳು ಶೃಂಗರಿಸಿಕೊಂಡಂತೆ ಶೃಂಗರಿಸಿಕೊಂಡು ಅದನ್ನು ಪ್ರದರ್ಶಿಸುತ್ತಾ ಹೊರಗಿಳಿಯುವುದು ನಿಮಗೆ ಭೂಷಣವಲ್ಲ. (ತಫ್ಹೀಮುಲ್ ಕುರ್‌ಆನ್)


“…ಅಜ್ಞಾನ ಕಾಲದಲ್ಲಿ ಮಹಿಳೆಯರು ಒಂದು ರೀತಿಯ ವಸ್ತ್ರದಿಂದ ತಮ್ಮ ತಲೆಯನ್ನು ಮರೆಸುತ್ತಿದ್ದರು. ಅದರ ಉಳಿದ ಭಾಗವನ್ನು ಹಿಂಬದಿಗೆ ಹಾಕಿಕೊಳ್ಳುತ್ತಿದ್ದರು. ಎದೆಯ ಮೇಲ್ಭಾಗವು ತೆರೆದಿಡುವ ಸ್ಥಿತಿಯಲ್ಲಿತ್ತು. ಆದ್ದರಿಂದ ಎದೆಯ ಭಾಗಗಳು ಗೋಚರಿಸುತ್ತಿತ್ತು. ಈ ಸೂಕ್ತ ಅವತೀರ್ಣಗೊಂಡ ಬಳಿಕ ಮುಸ್ಲಿಮ್ ಮಹಿಳೆಯರಲ್ಲಿ ಮುಸುಕು ಹಾಕಿಕೊಳ್ಳುವುದು ಜಾರಿಗೆ ಬಂತು. (ತಫ್ಹೀಮುಲ್ ಕುರ್‌ಆನ್)


ಶಿರವಸ್ತ್ರವೆಂದರೆ ಅದನ್ನು ಕುತ್ತಿಗೆಗೆ ಸುತ್ತಿಕೊಳ್ಳುವುದಲ್ಲ. ಆ ವಸ್ತ್ರದಿಂದ ತಲೆ, ಎದೆಯ ಭಾಗ, ಸೊಂಟವು ಚೆನ್ನಾಗಿ ಮರೆಸಲ್ಪಡಬೇಕು. ಕುರ್‌ಆನ್‌ನ ಈ ಆದೇಶ ಬಂದ ಕೂಡಲೇ ಸತ್ಯವಿಶ್ವಾಸಿನಿಯರು ಅದನ್ನು ಅನುಸರಿಸಿದರು. ಅವರನ್ನು ಅಭಿನಂದಿಸುತ್ತಾ ಆಯಿಶಾ(ರ) ಹೇಳಿದರು: “ಸೂರತುನ್ನೂರ್ ಅವತೀರ್ಣಗೊಂಡಾಗ ಜನರು ತಮ್ಮ ಮನೆಗಳಿಗೆ ಮರಳಿದರು. ತಮ್ಮ ಪತ್ನಿ, ಹೆಣ್ಣು ಮಕ್ಕಳು ಮತ್ತು ಸಹೋದರಿಯರಿಗೆ ಈ ಸೂಕ್ತವನ್ನು ತಿಳಿಸಿದರು. ತಮ್ಮ ಶಿರವಸ್ತ್ರವನ್ನು ಎದೆಯ ಮೇಲೆ ಇರಿಸಿರಿ” ಎಂಬ ಸೂಕ್ತ ಕೇಳಿದಾಗ ಎಲ್ಲಾ ಅನ್ಸಾರ್ ಮಹಿಳೆಯರೂ ಅದನ್ನು ಪಾಲಿಸಿದರು. ಕೆಲವರು ತಮ್ಮ ಸೊಂಟದಲ್ಲಿದ್ದ ವಸ್ತ್ರಗಳನ್ನೂ, ಬೈರಾಸುಗಳನ್ನು ತೆಗೆದು ಸ್ಕಾರ್ಫ್ ಆಗಿ ಉಪಯೋಗಿಸಿದರು. ಮರುದಿನ ಸುಬಹ್ ನಮಾಝ್‌ಗೆ ಮಸ್ಜಿದುನ್ನಬವಿಗೆ ಬಂದ ಮಹಿಳೆಯರೆಲ್ಲರೂ ಮೇಲ್ವಸ್ತ್ರ ಧರಿಸಿದ್ದರು. ಈ ಕುರಿತು ಬಂದ ಇನ್ನೊಂದು ವರದಿಯಲ್ಲಿ ಆಯಿಶಾ(ರ) ಹೀಗೂ ಹೇಳಿರುವರು, ಮಹಿಳೆಯರು ತೆಳುವಾದ ವಸ್ತ್ರವನ್ನು ತೆಗೆದಿರಿಸಿ, ದಪ್ಪಗಾದ ಬಟ್ಟೆಗಳನ್ನು ಹೊದ್ದುಕೊಂಡರು. (ಇಬ್ನು ಕಸೀರ್, ಅಬೂದಾವೂದ್)


ಸ್ತ್ರೀಯರ ವಸ್ತ್ರಧಾರಣೆಯ ಸವಿಶೇಷತೆಗಳು


1. ಶರೀರವು ಸಂಪೂರ್ಣವಾಗಿ (ಮುಖ ಮತ್ತು ಮುಂಗೈ ಹೊರತುಪಡಿಸಿ) ಮುಚ್ಚುವುದು.

ಆಯಿಶಾ(ರ) ಹೇಳುತ್ತಾರೆ: “ಅಬೂಬಕರ್‌ರ ಮಗಳು ಅಸ್ಮಾ ತೆಳುವಾದ ವಸ್ತ್ರಧರಿಸಿ ಪ್ರವಾದಿಯವರ(ಸ) ಬಳಿಗೆ ಬಂದರು. ಆಗ ಪ್ರವಾದಿಯವರು(ಸ) ಮುಖ ತಿರುಗಿಸಿದರು. ಬಳಿಕ ಮುಖ ಮತ್ತು ಮುಂಗೈ ತೋರಿಸುತ್ತಾ ಹೇಳಿದರು: “ಅಸ್ಮಾ, ಹೆಣ್ಣು ಪ್ರಾಯ ಪೂರ್ತಿಯಾದರೆ ಇವುಗಳ ಹೊರತು ಬೇರೆ ಯಾವುದೂ ಹೊರಗೆ ಕಾಣಬಾರದು.(ಅಬೂದಾವೂದ್-4704)


2. ಒಳಗಿನ ಭಾಗಗಳು ಅಸ್ಪಷ್ಟವಾಗಿಯೂ, ಸ್ಪಷ್ಟವಾಗಿಯೂ ಕಾಣುವಂತಿರಬಾರದು.

ಪ್ರವಾದಿ(ಸ) ಹೇಳಿರುವರು, “ವಸ್ತ್ರವನ್ನು ಧರಿಸಿಯೂ ನಗ್ನತೆಯನ್ನು ತೋರಿಸುವವರು, ವಯ್ಯಾರದಿಂದ ತಲೆ ಕುಣಿಸಿಕೊಂಡು ಸಾಗುವ ಮಹಿಳೆಯರು ನರಕವಾಸಿಗಳಾಗಿದ್ದಾರೆ. ಅವರು ಸ್ವರ್ಗವನ್ನು ಪ್ರವೇಶಿಸಲಾರರು. ಅದರ ಸುವಾಸನೆಯನ್ನೂ ಅನುಭವಿಸಲಾರರು.” (ಮುಸ್ಲಿಮ್- 5704)

ಬನೂ ತಮೀಮ್ ಗೋತ್ರದ ಕೆಲವು ಮಹಿಳೆಯರು ಆಯಿಶಾ(ರ)ರ ಬಳಿಗೆ ಬಂದರು. ತೆಳುವಾದ ವಸ್ತ್ರವನ್ನು ಅವರು ಧರಿಸಿದ್ದರು. ಆಗ ಆಯಿಶಾ(ರ) ಹೇಳಿದರು: “ನೀವು ಸತ್ಯವಿಶ್ವಾಸಿನಿಗಳಾದರೆ ಇದು ಸತ್ಯವಿಶ್ವಾಸಿನಿಯರ ವಸ್ತ್ರವಲ್ಲ.” (ಕುತ್ತುಬಿ:14/24)

ಈ ಒಂದು ನಿಬಂಧನೆಯನ್ನು ತಮ್ಮ ಮಕ್ಕಳಿಗೆ ವಸ್ತ್ರಗಳನ್ನು ಖರೀದಿಸಿ ಕೊಡುವಾಗ ಹೆತ್ತವರು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ಸಣ್ಣ ಮಕ್ಕಳ ವಿಷಯವಲ್ಲ. ಬದಲಾಗಿ ಪ್ರಾಯ ಪೂರ್ತಿಯಾಗದಿದ್ದರೂ ಕಾಮುಕರ ದೃಷ್ಟಿಯಿಂದ ತಮ್ಮ ಮಕ್ಕಳನ್ನು ರಕ್ಷಿಸಬೇಕೆಂದು ಬಯಸುವವರು ತಮ್ಮ ಮಕ್ಕಳು ಯಾರಿಂದಲೂ ಕಿರುಕುಳಕ್ಕೆ ಒಳಗಾಗದ ರೀತಿಯ ಉಡುಪನ್ನು ಖರೀದಿಸಲು ಗಮನಹರಿಸಬೇಕು.


3. ಶರೀರಕ್ಕೆ ಅಂಟಿಕೊಂಡಂತಹ ವಸ್ತ್ರವಾಗದಿರಲಿ.

ಕಾಮಾಸಕ್ತಿ ಉತ್ತೇಜಿಸುವ ರೀತಿಯಲ್ಲಿ ದೇಹಭಾಗಗಳನ್ನು ಸ್ಪಷ್ಟವಾಗಿ ತೋರಿಸುವ ಬಿಗಿಯಾದ ಉಡುಪುಗಳನ್ನು ಧರಿಸಿಕೂಡದು. ಉಸಾಮ ಬಿನ್ ಝೈದ್ ಹೇಳುತ್ತಾರೆ: ದಿಹಿಯತುಲ್ ಕಲ್ಬಿ ಪ್ರವಾದಿಯವರಿಗೆ(ಸ), ಬಹುಮಾನವಾಗಿ ನೀಡಿದ ಈಜಿಪ್ಟ್ ನಿರ್ಮಿತ ವಸ್ತ್ರವನ್ನು ನನಗೆ ತೊಡಿಸಿದ್ದರು. ನಾನು ಅದನ್ನು ನನ್ನ ಪತ್ನಿಗೆ ನೀಡಿದೆ. ಪ್ರವಾದಿ(ಸ) ನನ್ನೊಂದಿಗೆ ಕೇಳಿದರು: ಏನು, ನೀನು ಆ ಉಡುಪು ಹಾಕಲಿಲ್ಲವೇ? ನಾನು ಹೇಳಿದೆ: ನಾನದನ್ನು ನನ್ನ ಪತ್ನಿಗೆ ಕೊಟ್ಟಿದ್ದೇನೆ. ಆಗ ಪ್ರವಾದಿ(ಸ) ಹೇಳಿದರು: ಹಾಗಿದ್ದರೆ ಅವಳೊಂದಿಗೆ ಅದರ ಒಳಗೆ ಇನ್ನೊಂದು ವಸ್ತ್ರವನ್ನು ಧರಿಸಲು ಹೇಳಬೇಕು. ಏಕೆಂದರೆ ಅದು ತೆಳುವಾಗಿರುವುದರಿಂದ ದೇಹಭಾಗಗಳು ಗೋಚರಿಸಬಹುದೆಂದು ನನಗೆ ಆತಂಕವಿದೆ.” (ಅಹ್ಮದ್: 21786)


ಇಂದು ಮಾರುಕಟ್ಟೆಗೆ ಬರುತ್ತಿರುವ ವಸ್ತ್ರಗಳ ಫ್ಯಾಶನ್ ರೀತಿಗಳು, ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತಿದ್ದ ಪರ್ದಾದಲ್ಲೂ ಇದೆ. ದೇಹದ ಸೌಂದರ್ಯವನ್ನು ಆದಷ್ಟು ಹೆಚ್ಚು ರೀತಿಯಲ್ಲಿ ಪ್ರದರ್ಶಿಸುವ ರೀತಿಯ ವಸ್ತ್ರಗಳೇ ಇದು ತುಂಬಿಕೊಂಡಿದೆ. ಚೂಡಿದಾರ್ ಎಂಬಂತಹ ಗೌರವಾರ್ಹ ವಸ್ತ್ರವೂ ಕೂಡಾ ಬಿಗಿಯಾಗಿಯೂ, ಗಾಳಿ ಬೀಸಿದರೆ ಹೊಟ್ಟೆ ಕಾಣುವ ರೀತಿಯಲ್ಲೂ ಇರುತ್ತದೆ. ಸೀರೆ ಉಡುವ ಸಹೋದರಿಯರೂ ಕೂಡಾ ಸಣ್ಣ ರವಕೆಯನ್ನು ಧರಿಸುವಾಗ ಸಂಪೂರ್ಣವಾಗಿ ಎದೆಯನ್ನು ಮುಚ್ಚುವಂತಹ ಸೊಂಟದ ಭಾಗಗಳು ಕಾಣದ ರೀತಿಯಲ್ಲಿ ಸ್ಕಾರ್ಫ್ ಹಾಕಬೇಕು.


4. ಪುರುಷರು ಧರಿಸುವ ವಸ್ತ್ರ ಧರಿಸುವಂತಿಲ್ಲ.

ಏಕೆಂದರೆ ಮಹಿಳೆಯರ ಉಡುಪನ್ನು ಪುರುಷರು ಧರಿಸುವುದನ್ನೂ ಸ್ತ್ರೀಯರು ಪುರುಷರ ಉಡುಪು ಧರಿಸುವುದನ್ನೂ ಪ್ರವಾದಿಯವರು(ಸ) ಶಪಿಸಿದ್ದಾರೆ. (ಅಹ್ಮದ್: 2006)

ಇಲ್ಲಿ ಮಹಿಳೆಯರ ವಸ್ತ್ರ, ಪುರುಷರ ವಸ್ತ್ರ ಎಂದು ಹೇಳಿರುವುದು ಪ್ರತಿಯೊಂದು ಸ್ಥಳದ ವಸ್ತ್ರಧಾರಣೆ ರೀತಿಯನ್ನು ನೋಡಿಕೊಂಡು ಆಗಿದೆ. ಒಂದು ಊರಿನಲ್ಲಿ ಪುರುಷರು ಧರಿಸುವ ವಸ್ತ್ರವು ಇನ್ನೊಂದೆಡೆಯಲ್ಲಿ ಮಹಿಳೆಯರು ಧರಿಸುವ ವಸ್ತ್ರವಾಗಿರಲೂ ಬಹುದು. ಇದಕ್ಕೆ ವಿರುದ್ಧವೂ ಇರಬಹುದು.

ಅರಬ್ ದೇಶಗಳಲ್ಲಿ ಮಹಿಳೆಯರಿಗೆ ಮಾತ್ರ ಸಿದ್ಧಪಡಿಸುವ ಪ್ಯಾಂಟ್ಸ್ ಮಾದರಿಗಳು ಕಾಣುತ್ತದೆ. ಇಂಡೋನೇಶ್ಯಾದಂತಹ ದೇಶಗಳಲ್ಲೂ ಸಹೋದರಿಯರು ಆ ರೀತಿಯ ಪ್ಯಾಂಟ್‌ಗಳನ್ನು ಧರಿಸುತ್ತಾರೆ. ಅವೆಲ್ಲವೂ ಬಹಳ ಸಡಿಲವಾಗಿಯೂ ನೋಡುವಾಗಲೇ ಮಹಿಳೆಯ ಉಡುಪು ಎನ್ನುವಂತೆಯೂ ತೋರುತ್ತದೆ.


5. ನಿರ್ದಿಷ್ಟ ಧರ್ಮೀಯರಿಗೆ ಮಾತ್ರ ಮೀಸಲಿರುವಂತಹ ವಸ್ತ್ರವೂ ಆಗಬಾರದು.

ಏಕೆಂದರೆ ರೂಪದಲ್ಲೂ ಭಾವದಲ್ಲೂ ಮುಸ್ಲಿಮ್ ಸ್ತ್ರೀ -ಪುರುಷರಿಗೆ ಸ್ವತಂತ್ರವೂ ಸವಿಶೇಷವಾದ ವ್ಯಕ್ತಿತ್ವವಿರಬೇಕೆಂದು ತಿಳಿಸಿರುವ ಇಸ್ಲಾಮ್ ಅಂತಹ ವಸ್ತ್ರಗಳನ್ನು ವಿರೋಧಿಸುತ್ತದೆ. ಆದ್ದರಿಂದಲೇ ಇಸ್ಲಾಮ್ ಹಲವು ವಿಷಯಗಳಲ್ಲಿ ಇತರರಿಗಿಂತ ಭಿನ್ನತೆಯನ್ನು ಪ್ರಕಟಿಸಲು ಸೂಚಿಸುತ್ತದೆ.


ಮಹಿಳೆಯರ ವಸ್ತ್ರಧಾರಣೆಗೆ ಸಂಬಂಧಿಸಿದಂತೆ ಇವು ಇಸ್ಲಾಮಿನ ನಿಯಮ ನಿಬಂಧನೆಗಳು. ಈ ನಿಬಂಧನೆಗಳಂತೆ ಯಾವುದೇ ವಸ್ತ್ರವನ್ನೂ ಮುಸ್ಲಿಮ್ ಮಹಿಳೆ ಧರಿಸಬಹುದು. ಅದರಲ್ಲಿ ಪ್ರಾದೇಶಿಕತೆಯನ್ನು ಇಸ್ಲಾಮ್ ಗೌರವಿಸುತ್ತದೆ. ಅರೇಬಿಯನ್ ರೀತಿಯನ್ನೇ ಅನುಸರಿಸಬೇಕೆಂಬ ನಿರ್ಬಂಧವಿಲ್ಲ. ಹಾಗೆ ಭಾವಿಸಿಕೊಂಡಿದ್ದರೆ ಅದು ಸರಿಯಲ್ಲ. 


ಕೃಪೆ: ಅನುಪಮ ಮಹಿಳಾ ಮಾಸಿಕ