22 Apr 2022

ಮದ್ಹಬ್'ಗಳ ಅಂಧಾನುಕರಣೆ ಮತ್ತು ಮದ್ಹಬ್'ನ ಇಮಾಮರು.

 


ಮದ್ಹಬ್ ಗಳ ಇಮಾಮರುಗಳಾಗಿ ಅರಿಯಲ್ಪಡುವ ಇಮಾಮ್ ಅಬೂ ಹನೀಫಾ ರಹಿಮಹುಲ್ಲಾಹ್, ಇಮಾಮ್ ಮಾಲಿಕ್ ರಹಿಮಹುಲ್ಲಾಹ್, ಇಮಾಮ್ ಶಾಫಿಈ ರಹಿಮಹುಲ್ಲಾಹ್ ಮತ್ತು ಇಮಾಮ್ ಅಹ್ಮದ್ ಇಬ್ನ್ ಹಂಬಲ್ ರಹಿಮಹುಲ್ಲಾಹ್ ರವವರುಗಳು ಇಸ್ಲಾಮಿಕ ಲೋಕಕ್ಕೆ ವೈಜ್ಞಾನಿಕವಾದ ಹಲವಾರು ಕೊಡುಗೆಗಳನ್ನು ನೀಡಿದವರಾಗಿದ್ದಾರೆ. ಆದರೆ ಅವರಲ್ಲಿ ಯಾರೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಒಂದು ಮದ್ ಹಬಾಗಿ ಘೋಷಣೆ ಮಾಡಿ ಸಮೂಹಕ್ಕೆ ಕೊಟ್ಟು ಹೋದವರಲ್ಲ. ಬದಲಾಗಿ ಅವರ ನಂತರದ ಕಾಲಗಳಲ್ಲಿ ತಮ್ಮ ಅನುಚರರಾಗಿರುವವರು ಅವರ ಹೆಸರಿನ ಮದ್ ಹಬ್ ಗಳನ್ನು ಆವಿಷ್ಕರಿಸಿರುವುದು.

ಕಾಲ ಕ್ರಮೇಣ ಅವರ ಅನುಚರರೆಂದು ವಾದಿಸುವ ಕೆಲವು ಸ್ಥಾಪಿತ ಹಿತಾಸಕ್ತಿ ಹೊಂದಿದವರು ಪ್ರಸ್ತುತಃ ಮದ್ ಹಬ್ ಗಳನ್ನು ಧರ್ಮದ ಅಂತಿಮ ಮಾತಾಗಿ ನಿರ್ಣಯಿಸಿದರು. ನಾಲ್ಕು ಮದ್ ಹಬ್ ಗಳು ಸತ್ಯ ಪೂರ್ಣವೆಂದೂ ಪ್ರಸ್ತುತಃ ನಾಲ್ಕರಲ್ಲಿ ಯಾವುದಾದರೂ ಒಂದನ್ನು ಅನುಸರಿಸದಿದ್ದರೆ ಯಾರಿಂದಲೂ ಸ್ವರ್ಗ ಪ್ರವೇಶ ಸಾಧ್ಯವಿಲ್ಲ ವೆಂದೂ ವಾದಿಸತೊಡಗಿದರು. ಆ ವಾದವು, ಇಸ್ಲಾಮಿನ ಮೂಲ ಪ್ರಮಾಣಗಳಾದ ಕುರ್ ಆನ್ ಮತ್ತು ಸುನ್ನತ್ತನ್ನು ನಿರಾಕರಿಸುವ ವರೆಗೂ ತಲುಪಿತು.!

ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

"ನಾಲ್ಕು ಮದ್ ಹಬ್ ಗಳ ಹೊರತಾಗಿರುವುದನ್ನು ಅನುಸರಿಸುವುದು ಅನುವದನೀಯವಲ್ಲ. ಅದು ಒಂದು ವೇಳೆ ಸಹಾಬಿಗಳ ವಾಕ್ಯ ಮತ್ತು ಸಹೀಹಾದ ಹದೀಸ್ ಗೆ ಪೂರಕವಾಗಿ ಕಂಡರೂ ಸರಿಯೇ. ನಾಲ್ಕು ಮದ್ ಹಬ್ ಗಳ ಹೊರತಾಗಿ ಮುಂದಡಿಯಿಡುವವನು ಪಥಭ್ರಷ್ಟನೂ ಇತರರನ್ನು ಪಥಭ್ರಷ್ಟತ್ಞ್ಗೆ ಕೊಂಡೊಯ್ಯುವವನೂ ಆಗಿರುವನು."

[ತಫ್ಸೀರ್ ಸ್ವಾವೀ : 3/9]

ನೋಡಿರಿ, ಇದು ಎಷ್ಟೊಂದು ಅಪಾಯಕಾರಿ ಗೆರೆಗಳಾಗಿವೆ! ಆದರೆ ಮದ್ ಹಬ್ ನ ಇಮಾಮ್ ಗಳು ಇವುಗಳಿಗೆ ಕಾರಣಕರ್ತರೇ...? ಎಂದಿಗೂ ಅಲ್ಲ! ಅವರಲ್ಲಿ ಯಾರೊಬ್ಬರೂ ಕೂಡ ನಾವು ಹೇಳುವುದೇ ಧರ್ಮದಲ್ಲಿ ಕೊನೆಯ ಮಾತೆಂದು ಅಥವಾ ನಮ್ಮನ್ನು ಆಧಾರ ರಹಿತವಾಗಿ ತಕ್ಲೀದ್ ಮಾಡಬೇಕೆಂದು ಹೇಳಲಿಲ್ಲ. ಬದಲಾಗಿ ಅವರು ಹೇಳಿರುವುದು; ನಾವು ಧಾರ್ಮಿಕ ವಿಷಯದಲ್ಲಿ ಪೂರ್ಣರಲ್ಲ ಮತ್ತು ನಾವು ಹೇಳಿದ ವಿಷಯಕ್ಕೆ ವಿರುದ್ಧವಾಗಿ ಪ್ರವಾದಿ (ಸ.ಅ) ರವರ ಹದೀಸ್ ಲಭಿಸಿದರೆ ನಮ್ಮ ಅಭಿಪ್ರಾಯಗಳನ್ನು ದೂರವಿಟ್ಟು ಪ್ರವಾದಿ (ಸ.ಅ) ರ ಮಾತುಗಳ ಕಡೆಗೆ ಮರಳಬೇಕೆಂದಾಗಿದೆ. ಇದಕ್ಕೆ ಹಲವು ಉದಾಹರಣೆ ಗಳನ್ನು ಅವರ ಮತ್ತು ಅವರ ಶಿಷ್ಯರುಗಳ ಗ್ರಂಥದಲ್ಲಿ ಕಾಣಬಹುದು. ಅದರಲ್ಲಿ ಕೆಲವನ್ನು ನೋಡಿ.

"ಇಮಾಮ್ ಶಾಫಿಈ ರಹಿಮಹುಲ್ಲಾಹ್ ರವರು ಹೇಳುತ್ತಾರೆ: ನಾನೊಂದು ಅಭಿಪ್ರಾಯವನ್ನು ತಾಳಿದೆ ಅಥವಾ ನಾನು ಯಾವುದಾದರೊಂದು ಮೌಲಿಕ ನಿಯಮವನ್ನು ಜಾರಿಗೆ ತಂದ ನಂತರ , ನಿಮ್ಮಲ್ಲೊಬ್ವರು ಅದಕ್ಕೆ ವಿರುದ್ಧವಾದ ಪ್ರವಾದಿ (ಸ.ಅ) ರ ವಚನವನ್ನು ಕಂಡರು ಎಂದಾದರೆ ನೀವು ಅನುಸರಿಸಬೇಕಾದುದು ಪ್ರವಾದಿ (ಸ.ಅ) ರವರ ವಚನವನ್ನಾಗಿದೆ."
[ಹುಜ್ಜತುಲ್ಲಾಹಿಲ್ ಬಾಲಿಗ ಮಳಯಾಳಂ ಅನುವಾದ, ಪುಟ: 429, ಅನುವಾದಕರು: ಕೆ.ವಿ. ಮುಹಮ್ಮದ್ ಮುಸ್ಲಿಯಾರ್]

ಮಾತ್ರವಲ್ಲ, ಮಹಾನರಾದ ಇಮಾಮ್ ಶಾಫಿಈ ರಹಿಮಹುಲ್ಲಾಹ್ ರವರು ತಮ್ಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಅವರ ಶಿಷ್ಯರಾದ ಇಮಾಮ್ ಮುಝ್ನಿಗೆ ನೀಡಿದ ಒಂದು ವಸಿಯ್ಯತ್ತ್ " ನನ್ನನ್ನು ತಕ್ಲೀದ್ (ಅಂಧಾನುಸರಣೆ) ಮಾಡಕೂಡದು" ಎಂದಾಗಿದೆ.
[ಮುಖ್ತಸರ್ ಮುಝ್ನಿ: ಪುಟ: 1]

ಚಿಂತಿಸಿರಿ! ಒಬ್ಬರಿಗೆ ಇದಕ್ಕಿಂತ ಮಿಗಿಲಾಗಿ ಹೇಳಲಿಕ್ಕೇನಿದೆ? ಅಂದಿನ ಸೌಕರ್ಯ ಮತ್ತು ಅವಸ್ಥೆಗನುಸಾರವಾಗಿ ಅಗಾಧ ಜ್ಞಾನವನ್ನು ಪಡೆದ ತಮ್ಮ ಶಿಷ್ಯನಲ್ಲಿ ಕೂಡ ಇಂತಹ ಉಪದೇಶ ವನ್ನು ನೀಡುವುದಾದರೆ, ನಂತರದ ಕಾಲದಲ್ಲಿ ಅವರ ಹೆಸರಿನಲ್ಲಿ ಮದ್ ಹಬನ್ನು ರಚಿಸಿ ಅವುಗಳನ್ನು ಅಂಧವಾಗಿ ತಕ್ಲೀದ್ ಮಾಡಬೇಕೆಂದೂ, ತಕ್ಲೀದ್ ಮಾಡದವನು ಇಸ್ಲಾಮಿನಿಂದ ಹೊರಹೋದನೆಂದೂ ಕೊಚ್ಚುವವರು ಎಷ್ಟು ಘೋರ ಅಪರಾಧವನ್ನು ಇಸ್ಲಾಮಿನ ಮತ್ತು ಆ ಮಹಾನರ ಹೆಸರಿನಲ್ಲಿ ಮಾಡುತ್ತಿದ್ದಾರೆ! ಮಾತ್ರವಲ್ಲ, ಅವರಿಗೆ ಹಲವು ವಿಷಯಗಳ ಬಗ್ಗೆ ಹದೀಸ್ ಲಭಿಸದಿದ್ದುದರಿಂದ ಅವರು ಸಹೀಹಾದ ಹದೀಸ್ ಗಳಲ್ಲಿರುವವುಗಳಿಗೆ ವಿರುದ್ಧವಾಗಿ ಹೇಳಿದ್ದಾರೆ, ಆ ಕಾರಣವನ್ನು ಹೇಳಿ ಶಿಷ್ಯರು ಅವರನ್ನು ಆ ವಿಷಯದಲ್ಲಿ ಕೈ ಬಿಟ್ಟು ಸುನ್ನತ್ ನ ಕಡೆಗೆ ಮರಳಿರುವುದಾಗಿ ಶಿಷ್ಯರುಗಳ ಗ್ರಂಥಗಳಲ್ಲಿ ಕಾಣಲು ಸಾಧ್ಯ.

ಹಝ್ರತ್ ಇಮಾಮ್ ಮಾಲಿಕ್ ರಹಿಮಹುಲ್ಲಾ ಹೇಳುತ್ತಾರೆ,

ಪ್ರಪಂಚದಲ್ಲಿ ಮಾತುಗಳು ಸರಿ ತಪ್ಪು ಆಗದಂತಹ ಮನುಷ್ಯರೇ ಇಲ್ಲ......ನಂತರ ಅವರ ಸರಿಯಾದಂತಹ ಮಾತುಗಳನ್ನು ಒಪ್ಪಲಾಗುತ್ತದೆ. ಮತ್ತು ತಪ್ಪು ಅಭಿಪ್ರಾಯಗಳನ್ನು ಅಥವಾ ಯಾವುದೇ ಆಧಾರಗಳಿಲ್ಲದೆ ಆಡಿದಂತಹ ಮಾತುಗಳನ್ನು ನಿಷೇಧಿಸಲಾಗುತ್ತದೆ.
ಆದರೆ ನಮ್ಮ ನಿಮ್ಮೆಲ್ಲರ ಕಣ್ಮಣಿ ಲೋಕಾನುಗ್ರಹ ಹಝ್ರತ್ ಮಹಮ್ಮದ್ ಮುಸ್ತಫಾ(ಸ.ಅ) ಅವರ ಎಲ್ಲಾ ಮಾತುಗಳು ಸರಿ ಮತ್ತು ಒಪ್ಪಿಕೊಳ್ಳಲು ಅತ್ಯಂತ ಅರ್ಹವಾದುದಾಗಿದೆ.....ರಸೂಲುಲ್ಲಾಹ್(ಸ.ಅ) ರ ಒಂದೂ ಮಾತು ಕೂಡ ಇಡೀ ನಮ್ಮ ಜೀವನದಲ್ಲಿ ಅಲ್ಲಗೆಳೆಯುವಂತಹದ್ದಿಲ್ಲ.

[ಅಕ್ದುಲ್ ಜಿದ್ದ್:70]

ನಾನು ಒಬ್ಬಮನುಷ್ಯನಾಗಿದ್ದೇನೆ. ಕೆಲವೊಮ್ಮೆ ನನ್ನ ಅಭಿಪ್ರಾಯಗಳು ಸತ್ಯವಾಗುತ್ತದೆ ಮತ್ತು ಕೆಲವೊಮ್ಮೆ ಸುಳ್ಳು.
ಮತ್ತು ನೀವು ನನ್ನ ಆ ಮಾತುಗಳನ್ನು ಯಾವುದು ಕುರ್‌ಆನ್ ಮತ್ತು ಹದೀಸ್ ಗಳ ಆಧಾರದಲ್ಲಿದೆಯೋ ಅದನ್ನು ಸ್ವೀಕರಿಸಬಹುದಾಗಿದೆ. ಮತ್ತು ಆ ಮಾತುಗಳನ್ನು(ಅಭಿಪ್ರಾಯಗಳನ್ನು) ಯಾವುದು ಕುರ್‌ಆನ್ ಮತ್ತು ಹದೀಸ್ ಗಳ ವಿರುದ್ಧವಿದೆಯೋ ಅದನ್ನು ಬಿಟ್ಟುಬಿಡಿ. ನೀವು ನನ್ನ ಅಭಿಪ್ರಾಯಗಳತ್ತ ಗಮನ ಕೊಡಿ. ನನ್ನ ಯಾವ ಅಭಿಪ್ರಾಯ ಕುರ್‌ಆನ್ ಮತ್ತು ಹದೀಸ್ ಗಳ ಆಧಾರದಲ್ಲಿದೆಯೋ
ಅದನ್ನು ಒಪ್ಪಿಕೊಳ್ಳಿರಿ. ಮತ್ತು ಯಾವುದು ಕುರ್‌ಆನ್ ಮತ್ತು ಹದೀಸ್ ಗಳ ವಿರುದ್ಧವಿದೆಯೋ ಅದನ್ನು ಬಿಟ್ಟುಬಿಡಿ.

[ಹಕೀಕತುಲ್ ಫಿಕ್ಃ]

ಇಮಾಮ್ ಅಬೂ ಹನೀಫ [ರ] ಹೇಳುತ್ತಾರೆ;

ನನ್ನ ಮಾತು ಆಧಾರ ಪ್ರಮಾಣಗಳಿಂದ ದೃಡೀಕರಿಸಿಕೊಳ್ಳದ ಹೊರತು ನನ್ನ ಮಾತನ್ನು ಅನುಸರಿಸಿ ಪತ್ವಾ ನೀಡುವುದು ನಿಷಿದ್ದವಾಗಿದೆ.

[ಮೀಝೂನ್ ಶೈರಾನೀ, ಅಕದುಲ್ ಜಯ್ಯಿದ್ ಪುಟ 80]

ನನ್ನ ಮಾತು ಕುರಾನಿಗೆ ವಿರುದ್ದವಾಗಿದ್ದರೆ ಅದನ್ನು ಬಿಟ್ಟುಬಿಡಿ. ಜನರು ವಿಚಾರಿಸಿದರು; ನಿಮ್ಮ ಮಾತು ಹದೀಸಿಗೆ ವಿರುದ್ದವಾಗಿದ್ದರೆ...? ಅವರು ಹೇಳಿದರು? ಹಾಗಿದ್ದರೂ ನನ್ನ ಮಾತನ್ನು ಬಿಟ್ಟುಬಿಡಿರಿ. ಜನರು ಕೇಳಿದರು; ನಿಮ್ಮ ಮಾತು ಸಹಾಬಿಗಳ [ರ] ಮಾತನ್ನು ಮೀರುವುದಾಗಿದ್ದರೆ? ಅವರು ಹೇಳಿದರು; ಆಗಲೂ ನನ್ನ ಮಾತನ್ನು ಬಿಟ್ಟು ಬಿಡಿ.

[ಅಕದುಲ್ ಜಯ್ಯಿದ್ ಪುಟ 53]

"ನಮ್ಮ ಮಾತು ಕುರಾನ್ ಮತ್ತು ಹದೀಸಿಗೆ ವಿರುದ್ದವಾಗಿ ಕಂಡು ಬಂದರೆ ನೀವು ಕುರಾನ್ ಹದೀಸ್'ನ್ನು ಅನುಸರಿಸಿರಿ. ನಮ್ಮ ಮಾತನ್ನು ಗೋಡೆಗೆ ಹೊಡೆದು ಬಿಡಿ."

[ಮೀಝಾನ್ ಶೈರಾನಿ, ಅಕದುಲ್ ಜಯ್ಯಿದ್ ಪುಟ 58]

ಇಮಾಮ್ ಅಬೂ ಹನೀಫ[ರ]ರವರ ಈ ಮಾತು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಳ್ಳಲು ಅರ್ಹವಾದುದಾಗಿದೆ. ಅವರು ಹೇಳುತ್ತಾರೆ;
"ಸಹೀಹ್ ಆದ ಹದೀಸ್'ಗಳೇ ನನ್ನ ಮದ್ ಹಬ್ ಆಗಿದೆ."

[ಅಕದುಲ್ ಜಯ್ಯಿದ್]

"ನನ್ನನ್ನು ತಕ್ ಲೀದ್ (ಅಂದಾನುಸರಣೆ) ಮಾಡಬೇಡಿರಿ. ಮಾಲೀಕ್ ಇಮಾಮ[ರ]ರನ್ನು ತಕ್ ಲೀದ್ ಮಾಡದಿರಿ ಯಾರನ್ನೂ ತಕ್ ಲೀದ್ ಮಾಡಬೇಡಿರಿ. ಅವರು ಯಾವ ಮೂಲಗಳಿಂದ ಧಾರ್ಮಿಕ ವಿಧಿ-ನಿರ್ದೇಶನಗಳನ್ನು ಪಡೆದರೋ ಅಲ್ಲಿಂದ ಮಾರ್ಗದರ್ಶನ ಪಡೆಯಿರಿ ಅಂದರೆ ಕುರಾನ್ ಮತ್ತು ಹದೀಸ್'ಗಳಿಂದ."

[ತುಹ್'ಫತುಲ್ ಅಖ್ ಯಾರ್ ಅದ್ಸಾಹ್ ಫಿ ಬಯಾನುನಿಲ್ ಅಬ್ರಾರ್]

ಅಂದರೆ ನಾಲ್ಕು ಮದ್ ಹಬ್ ನ ಇಮಾಮರುಗಳು ಸಮುದಾಯಕ್ಕೆ ಕಲಿಸಿರುವ ವಿಷಯ: ನಮ್ಮ ಮಾತುಗಳಿಗೆ ವಿರುದ್ಧವಾಗಿ ಪ್ರವಾದಿ (ಸ.ಅ) ರವರ ಸುನ್ನತ್ (ಹದೀಸ್) ಲಭಿಸಿದರೆ ಅದರೆಡೆಗೆ ಮರಳಿ ನಮ್ಮ ಮಾತುಗಳನ್ನು ಉಪೇಕ್ಷಿಸಬೇಕು ಎಂದಾಗಿದೆ. ಕಾರಣ ಅವರಿಗೆ ಪ್ರವಾದಿ (ಸ.ಅ) ರ ಸುನ್ನತ್ ಪರಿಪೂರ್ಣವಾಗಿ ಲಭಿಸಿಲ್ಲವೆಂಬುದು ಅವರಿಗೆ ಸರಿಯಾಗಿ ತಿಳಿದಿತ್ತು. ಅವರೆಲ್ಲರೂ ಏಕಸ್ವರದಲ್ಲಿ ಘೋಷಿಸಿರುವುದು
"اذا صح الحديث فهو مذهبي"
(ಹದೀಸ್ ಸ್ವಹೀಹ್ ಆಗಿ ಬಂದರೆ ಅದುವೇ ನನ್ನ ಮದ್ ಹಬ್)

ಇನ್ನು ಅವರು ಯಾಕೆ ಆ ರೀತಿ ಹೇಳಿದರು ಅವರಿಗೆ ಸಿಗದ್ದು ನಮಗೆ ಹೇಗೆ ಸಿಕ್ಕಿತು ಮಾರಾಯಾ ಅಂತ ಕೇಳೋರು ಇರಬಹುದು ಅಲ್ಲವೇ...ಕೇಳಿ ಅದಕ್ಕೊಂದು ಪ್ರತ್ಯೇಕ ಕಾರಣವಿದೆ; ಅವರೆಲ್ಲರ ಜೀವನ ಕಾಲದಲ್ಲಿ ಪ್ರವಾದಿ (ಸ.ಅ) ರವರ ವಚನಗಳು (ಹದೀಸ್ ಗಳು) ಇಂದಿನಂತೆ ಕ್ರೋಢೀಕರಿಸಲ್ಪಟ್ಟಿರಲಿಲ್ಲ ಎಂಬುದಾಗಿದೆ ಆ ಕಾರಣ. ಮಾತ್ರವಲ್ಲ ಮದ್ ಹಬ್ ನ ಇಮಾಮರು ಗಳು ತಾಳಿದ್ದ ಪೂರ್ವ ಅಭಿಪ್ರಾಯಗಳಿಗೆ ವಿರುದ್ಧವಾಗಿ ಹದೀಸ್ ಲಭಿಸಿದಾಗ ಹಿಂದಿನ ಅಭಿಪ್ರಾಯಗಳನ್ನು ತಿದ್ದಿದ್ದಾರೆ. ತಿದ್ದುವುದರಲ್ಲಿ ಅವರಿಗೆ ಯಾವುದೇ ತರಹದ ಭಯವಾಗಲಿ ಮುಜುಗರವಾಗಲಿ ಇರಲಿಲ್ಲ. ಮೊದಲು ಹೇಳಿದ ಅಭಿಪ್ರಾಯದಲ್ಲೇ ಅವರು ದೃಢವಾಗಿ ನಿಲ್ಲಲಿಲ್ಲ. ಇಂತಹ ವಿಶಾಲವಾದ ಮನಸ್ಸು ತೋರಿರುವುದರಿಂದಲೇ ಇಮಾಮ್ ಶಾಫಿಈ ರಹಿಮಹುಲ್ಲಾಹ್ ರಿಗೆ ಕದೀಮ್(ಹಳೆಯದು) ಮತ್ತು ಜದೀದ್ (ಹೊಸತು) ಎಂಬ ಎರಡು ಅಭಿಪ್ರಾಯಗಳು ಉಂಟಾಗಿರುವುದು. ಅದೂ ಅಲ್ಲದೆ ನಾಲ್ಕು ಅಥವಾ ಅದಕ್ಕಿಂತ ಅಧಿಕ ಮದ್ ಹಬ್ ಗಳು ಉಂಟಾಗಿರುವುದೇ ಒಬ್ಬರು ಮತ್ತೊಬ್ಬರನ್ನು ಅಂಧವಾಗಿ ಅನುಕರಣೆ ಮಾಡದಿರುವುದರಿಂದ ಮತ್ತು ತಮಗೆ ಲಭಿಸಿರುವ ಹೊಸ ಪುರಾವೆಗಳ ಕಡೆಗೆ ಮರಳಿರುವುದರಿಂದಲೂ ಆಗಿವೆ.

ಒಟ್ಟಿನಲ್ಲಿ ನಾವು ಸ್ವೀಕರಿಸಬೇಕಾದುದು; ಇಸ್ಲಾಮಿನ ಪ್ರಮಾಣಗಳಾದ ಕುರ್ ಆನ್ ಮತ್ತು ಸುನ್ನತಿನ ತೀರ್ಮಾನಗಳನ್ನಾಗಿವೆ. ಅದಕ್ಕೆ ಪೂರಕವಾದ ರೀತಿಯಲ್ಲಿರುವ ಅಭಿಪ್ರಾಯಗಳನ್ನು ಯಾವ ಮದ್ ಹಬ್ ನ ಇಮಾಮರುಗಳಾಗಲಿ ಹೇಳಿದರೆ ಅದನ್ನು ಸ್ವೀಕರಿಸಬಹುದು. ಆದರೆ ಆ ಪ್ರಮಾಣಗಳಿಗೆ ವಿರುದ್ಧವಾದವುಗಳನ್ನು ಅವರ ಗ್ರಂಥಗಳಲ್ಲಿ ಮತ್ತು ಅಭಿಪ್ರಾಯಗಳಲ್ಲಿ ಏನನ್ನಾದರೂ ಕಂಡರೆ ಅವರೊಂದಿಗಿರುವ ಎಲ್ಲಾ ರೀತಿಯ ಗೌರವವನ್ನಿಟ್ಟುಕೊಂಡೇ ಪ್ರಮಾಣಗಳ ಕಡೆಗೆ (ಕುರ್ ಆನ್ ಮತ್ತು ಸುನ್ನತ್) ಮರಳಬೇಕು. ಇಸ್ಲಾಮ್ ನೀಡುವ ಆದೇಶ ಮತ್ತು ಮದ್ ಹಬ್ ನ ಇಮಾಮರುಗಳ ವಸಿಯ್ಯತ್ತ್ ಕೂಡ ಅದುವೇ ಆಗಿದೆ.

ಆ ಪ್ರಕಾರ, ಪ್ರಮಾಣಗಳ ಮತ್ತು ಸತ್ಯದ ಜೊತೆ ನಿಲ್ಲಲು ಹಾಗೂ ಅದಕ್ಕೆ ವಿರುದ್ಧ ನಡೆಯುವವರೊಂದಿಗೆ ಅಸಹಕಾರವನ್ನು ಪ್ರಕಟಿಸಲು ಅಲ್ಲಾಹನು ನಮಗೆ ತೌಫೀಕ್ ಮತ್ತು ದೃಢತೆಯನ್ನು ದಯಪಾಲಿಸಲಿ.